ಬೆಂಗಳೂರು: ಸುಮಾರು 200 ವರ್ಷಗಳಷ್ಟು ಪುರಾತನ ಕಾಲದ ಬುದ್ಧನ ವಿಗ್ರಹವನ್ನು ರಫ್ತು ಮಾಡಲು ಯತ್ನಿಸುತ್ತಿದ್ದ ಐವರನ್ನು ಸಂಪಂಗಿರಾಮನಗರ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಹೈದರಾಬಾದ್ ನಿವಾಸಿ ಪಂಚಮೃತಿ ರಘುರಾಮ ಚೌಧರಿ ಅಲಿಯಾಸ್ ಪಿ ರಘು (45), ಹೊರಮಾವಿನ ಉದಯ್ ಕುಮಾರ್ (37), ವಿವೇಕನಗರದ ಫ್ರೆಡ್ಡಿ ಡಿಸೋಜಾ (44), ಹೆಣ್ಣೂರು ಬಂಡೆಯ ಶರಣ್ ನಾಯರ್ (41) ಮತ್ತು ಕೊತ್ತನೂರಿನ ಪ್ರಸನ್ನ ಎಂಕೆ (39) ಎಂದು ಗುರುತಿಸಲಾಗಿದೆ.
ವುಡ್‌ಲ್ಯಾಂಡ್ಸ್ ಹೋಟೆಲ್ ಬಳಿ ಕೆಲವು ವ್ಯಕ್ತಿಗಳು ಬುದ್ಧನ ಪುರಾತನ ವಿಗ್ರಹವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ತಿಳಿದುಬಂದಿತ್ತು, ಇದರಂತೆ ನಮ್ಮ ತಂಡವು ಕಾರ್ಯಾಚರಣೆ ನಡೆಸಿ ಐವರನ್ನು ಬಂಧನಕ್ಕೊಳಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜೋಡಿ ಕೊಲೆ: ಸೆಕ್ಯುರಿಟಿ ಗಾರ್ಡ್- ಮನೆ ಕೆಲಸದವನ ಹತ್ಯೆ; ಚಿನ್ನಾಭರಣ, ನಗದು ದೋಚಿ ಪರಾರಿ
ವಿಗ್ರಹವು ಕಾನೂನುಬದ್ಧವಾಗಿ ಅವರಿಗೆ ಸೇರಿದ್ದಾಗಿದೆ ಎಂಬುದನ್ನು ಸಾಬೀತುಪಡಿಸಲು ಅವರ ಬಳಿ ಯಾವುದೇ ದಾಖಲೆಗಳಿರಲಿಲ್ಲ. ಹೀಗಾಗಿ ಅವರನ್ನು ಬಂಧನಕ್ಕೊಳಪಡಿಸಲಾಯಿತು. ಬಂಧಿತರಿಂದ 38 ಸೆಂ.ಮೀ ಬುದ್ಧನ ವಿಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೈದಾರಾಬಾದ್ ನಿವಾಸಿ ಶ್ರೀಕಾಂತ್ ಅವರಿಂದ ರೂ.30 ಲಕ್ಷ ನೀಡಿ ವಿಗ್ರಹ ಖರೀದಿ ಮಾಡಿರುವುದಾಗಿ ವಿಚಾರಣೆ ವೇಳೆ ರಘು ಎಂಬಾತ ಬಹಿರಂಗಪಡಿಸಿದ್ದಾನೆ. ಇಂತಹ ವಿಗ್ರಹಗಳಿಗೆ ವಿದೇಶಗಳಲ್ಲಿ ಬೇಡಿಕೆಗಳು ಇರುವುದರಿಂದ ವಿಗ್ರಹವನ್ನು ರಫ್ತು ಮಾಡಿ ಮಾರಾಟ ಮಾಡಿದರೆ ಕೋಟ್ಯಾಂತರ ರುಪಾಯಿ ಸಿಗಲಿದೆ ಈ ಹಣವನ್ನು ಎಲ್ಲರೂ ಹಂಚಿಕೊಳ್ಳಬಹುದು ಎಂದು ಆರೋಪಿಗಳು ಯೋಜಿಸಿದ್ದರು.
ವಿಗ್ರಹವನ್ನು ಎಲ್ಲಿಂದಲೋ ಕಳ್ಳತನ ಮಾಡಿದ್ದಾರೆ. ಆ ಬಗ್ಗೆ ತನಿಖೆ ನಡೆಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಪುರಾತನ ವಸ್ತುಗಳು ಮತ್ತು ಕಲಾ ನಿಧಿ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.