ರಾಜ್ಯ

ರಾಮದೇವರ ಬೆಟ್ಟವನ್ನು ದಕ್ಷಿಣದ ಅಯೋಧ್ಯೆಯನ್ನಾಗಿ ಅಭಿವೃದ್ಧಿ ಮಾಡಿ: ಮುಖ್ಯಮಂತ್ರಿಗೆ ಸಚಿವ ಅಶ್ವತ್ಥ್ ನಾರಾಯಣ ಪತ್ರ

Ramyashree GN

ಬೆಂಗಳೂರು: ರಾಜ್ಯದ ರಾಮನಗರ ಜಿಲ್ಲೆಯಲ್ಲಿನ ರಾಮದೇವರಬೆಟ್ಟವನ್ನು ದಕ್ಷಿಣದ ಅಯೋಧ್ಯೆಯನ್ನಾಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಈ ಸ್ಥಳವನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಸಚಿವರೊಬ್ಬರು ಪತ್ರ ಬರೆದ ನಂತರ ಸರ್ಕಾರ ಚಿಂತನೆಗೆ ಮುಂದಾಗಿದೆ ಎನ್ನಲಾಗಿದೆ.

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಸಚಿವ ಸಿಎನ್ ಅಶ್ವತ್ಥ್ ನಾರಾಯಣ ಅವರು, ದಕ್ಷಿಣ ಭಾರತದ ಅಯೋಧ್ಯೆಯನ್ನಾಗಿ ರಾಮದೇವರಬೆಟ್ಟವನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಪತ್ರ ಬರೆದಿದ್ದಾರೆ.

ರಾಮದೇವರಬೆಟ್ಟದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 19 ಎಕರೆ ಜಾಗದಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸ್ಥಳವು ದೇಶದ ಪ್ರಮುಖ ರಣಹದ್ದು ಸಂರಕ್ಷಿತ ಪ್ರದೇಶವಾಗಿದ್ದು, ಸಂಸ್ಕೃತಿಯನ್ನು ಬಿಂಬಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಯೋಧ್ಯೆಯ ರಾಮ ಮಂದಿರದ ಮಾದರಿಯಲ್ಲಿಯೇ ರಾಮದೇವರಬೆಟ್ಟದಲ್ಲಿ ಮಂದಿರ ನಿರ್ಮಿಸಲು ಅಭಿವೃದ್ಧಿ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ಸುಗ್ರೀವನು (ರಾಮಾಯಣ) ರಾಮದೇವರಬೆಟ್ಟವನ್ನು ಸ್ಥಾಪಿಸಿದನೆಂಬ ಬಲವಾದ ನಂಬಿಕೆ ಈ ಭಾಗದ ಜನರಲ್ಲಿದೆ. ಜಿಲ್ಲೆಯ ಜನರ ಧಾರ್ಮಿಕ ಭಾವನೆಗಳನ್ನು ಪರಿಗಣಿಸಿ ರಾಮದೇವರಬೆಟ್ಟವನ್ನು ಪಾರಂಪರಿಕ ಹಾಗೂ ಆಕರ್ಷಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಬಿಜೆಪಿ ಚಿಂತಿಸುತ್ತಿದೆ.

ಶ್ರೀರಾಮನು ವನವಾಸದ ದಿನಗಳಲ್ಲಿ ಸೀತೆ ಮತ್ತು ಲಕ್ಷ್ಮಣನ ಜೊತೆಗೆ ಇಲ್ಲಿ ಒಂದು ವರ್ಷ ಕಳೆದಿದ್ದಾನೆ. ಏಳು ಮಹಾಮುನಿಗಳು ಇಲ್ಲಿ ತಪಸ್ಸು ಮಾಡಿದರು ಎಂಬುದು ಜನರಲ್ಲಿರುವ ನಂಬಿಕೆ. ರಾಮದೇವರಬೆಟ್ಟ ಮತ್ತು ರಾಮಾಯಣದ ನಡುವಿನ ಸಾಂಪ್ರದಾಯಿಕ ಸಂಪರ್ಕವು 'ತ್ರೇತಾಯುಗ' ಯುಗದ ಹಿಂದಿನದು.

ರಾಮದೇವರಬೆಟ್ಟವು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 50 ಕಿಮೀ ದೂರದಲ್ಲಿದೆ.

SCROLL FOR NEXT