ರಾಜ್ಯ

ಹೊಸ ವರ್ಷ ಪಾರ್ಟಿಗಳ ಮೇಲೆ ಕ್ಯಾಮೆರಾಗಳ ಕಣ್ಗಾವಲು, ರಾತ್ರಿ 1 ಗಂಟೆವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ!

Manjula VN

ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಗೆ ಇನ್ನು ಕೇವಲ ಎರಡು ದಿನಗಳಷ್ಟೇ ಬಾಕಿ ಇದ್ದು, ನಗರದ ಎಲ್ಲಾ ವಿಭಾಗಗಳಲ್ಲಿ ಪೊಲೀಸರು ಅಗತ್ಯ ಭದ್ರತಾ ಕ್ರಮಗಳನ್ನ ಕೈಗೊಳ್ಳಲು ಸಿದ್ಧತೆ ಮಾಡಿಕೊಳುತ್ತಿದ್ದಾರೆ.

ಪಾರ್ಟಿ ಪ್ರಿಯರ ಹಾಟ್ ಸ್ಪಾಟ್​ಗಳಾಗಿರುವ ಕೋರಮಂಗಲ, ಎಚ್ಎಸ್ಆರ್ ಲೇಔಟ್, ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳಲು ಡಿಸಿಪಿ ಸಿ.ಕೆ.ಬಾಬಾ ನೇತೃತ್ವದಲ್ಲಿ ತಯಾರಿ ನಡೆದಿದೆ.

ನೂತನ ವರ್ಷಕ್ಕೆ ದಿನಗಣನೆ ಆರಂಭವಾಗಿದ್ದು ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹೊಸವರ್ಷದ ಸ್ವಾಗತಕ್ಕೆ ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಬುಧವಾರ ಬ್ರಿಗೇಡ್ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ಬಳಿಕ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು, ಹೊಸ ವರ್ಷದ ಸಂಭ್ರಮಾಚರಣೆಗೆ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ಇದ್ದ ನಿರ್ಬಂಧ ಈ ಬಾರಿ ಇಲ್ಲವಾದ್ದರಿಂದ ಸೂಕ್ತ ಭದ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಅತಿ ಹೆಚ್ಚು ಜನ ಸೇರುವ ಸ್ಥಳಗಳು ಬ್ರಿಗೇಡ್ ರಸ್ತೆ ಹಾಗೂ ಎಂ.ಜಿ ರಸ್ತೆಗಳಾಗಿವೆ. ಆ ಸ್ಥಳಗಳ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಇರಲಿದ್ದು ಡ್ರೋಣ್ ಮೂಲಕ ನಿಗಾ ವಹಿಸಲಾಗುವುದು' ಎಂದು ಮಾಹಿತಿ ನೀಡಿದರು.

ಸರ್ಕಾರದ ವತಿಯಿಂದ ರಾತ್ರಿ 1 ಗಂಟೆ ವರೆಗೆ ಮಾತ್ರ ಅನುಮತಿ ಆದೇಶ ಹೊರಡಿಸಲಾಗಿದೆ. ಬ್ರಿಗೇಡ್ ರೋಡ್‌ನಲ್ಲಿ ಪ್ರತಿವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ. ಈ ಹಿಂದೆಯೂ ಕೂಡ ಹಲವು ಬಾರಿ ವಿಸಿಟ್ ಮಾಡಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ಹೆಚ್ಚಿನ ಭದ್ರತೆಗೆ ಮೆಟಲ್ ಡಿಟೆಕ್ಟರ್, ಬಾಡಿ ಕ್ಯಾಮೆರಾ, ಡ್ರೋನ್ ಕ್ಯಾಮೆರಾ ಮೂಲಕ ನಿಗವಹಿಸಲಾಗುತ್ತೆ. ಈ ಬಾರಿ ಹೆಚ್ಚಿನದಾಗಿ ಹೆಣ್ಣು ಮಕ್ಕಳು, ಮಕ್ಕಳು, ಹಾಗೂ ವೃದ್ಧರಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ಲಾನ್ ಮಾಡಲಾಗಿದೆ. ಹಿಂದಿನ ವರ್ಷದಂತೆ ವೆಹಿಕಲ್‌ಗಳಿಗೆ ನಿರ್ಬಂಧಿಸಲಾಗಿದೆ. ಯಾವ ರೀತಿ ಸಾರ್ವಜನಿಕರಿಗೆ ಎಂಟ್ರಿ ಇರಲಿದೆ ಎನ್ನುವುದನ್ನೂ ಕೂಡಾ ಚಿಂತನೆ ನಡೆಸಲಾಗುತ್ತಿದೆ. ಬ್ರಿಗೇಡ್ ರಸ್ತೆಯಲ್ಲಿ ಡಿಸೆಂಬರ್ 31ರಂದು ವಾಹನ ಸಂಚಾರ ನಿರ್ಬಂಧವಿರಲಿದ್ದು, ಬದಲಿ ಮಾರ್ಗಗಳ ಬಗ್ಗೆ ಶೀಘ್ರದಲ್ಲೇ ಮಾರ್ಗಸೂಚಿ ನೀಡಲಾಗುವುದು ಎಂದು ತಿಳಿಸಿದರು.

SCROLL FOR NEXT