ರಾಜ್ಯ

ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ: ಬೆಸ್ಕಾಂ‌-ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ದರ ಕಡಿತ

Manjula VN

ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರದಲ್ಲಿದ್ದು, ಈ ನಡುವಲ್ಲೇ ಹೊಸ ವರ್ಷಕ್ಕೆ ರಾಜ್ಯ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಬೆಸ್ಕಾಂ‌-ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ದರವನ್ನು ಕಡಿತಗೊಳಿಸಿದೆ.

ಡಿಸೆಂಬರ್ 22 ರಂದು ಆದೇಶವನ್ನು ಹೊರಡಿಸಲಾಗಿದೆ. ಆದರೆ, ಗುರುವಾರ ಆದೇಶವನ್ನು ಸಾರ್ವಜನಿಕಗೊಳಿಸಲಾಯಿತು.

ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 37 ಪೈಸೆ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 39 ಪೈಸೆ ಕಡಿತ ಮಾಡಲಾಗಿದ್ದು, ಇದರ ಪ್ರಯೋಜನ ನೇರವಾಗಿ ಗ್ರಾಹಕರಿಗೆ ಲಭಿಸಲಿದೆ. ಆದರೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಮತ್ತು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ ಗ್ರಾಹಕರು ಪ್ರತಿ ಯೂನಿಟ್‌ಗೆ ಕ್ರಮವಾಗಿ 19 ಪೈಸೆ, 22 ಪೈಸೆ ಮತ್ತು 20 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ.

ಇಂಧನ ಇಲಾಖೆಯ ಅಧಿಕಾರಿಗಳು ಈಬಗ್ಗೆ ಪ್ರತಿಕ್ರಿಯೆ ನೀಡಿ, ಕಲ್ಲಿದ್ದಲು ಶುಲ್ಕಗಳು, ಕಲ್ಲಿದ್ದಲು ಪೂರೈಕೆ ಮತ್ತು ಸ್ಟಾಕ್, ಲಭ್ಯತೆಯಲ್ಲಿನ ಅನೇಕ ಏರಿಳಿತಗಳು, ನವೀಕರಿಸಬಹುದಾದ ಶಕ್ತಿ, ಶೇಖರಣೆ ಮತ್ತು ವಿದ್ಯುತ್ ಬೇಡಿಕೆ ಹೊಂದಾಣಿಕೆ ಶುಲ್ಕಗಳಿಗೆ ಕಾರಣವಾಗಿದೆ ಅಧಿಕಾರಿಯೊಬ್ಬರು ಹೇಳಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಮಾತನಾಡಿ, ಪರಿಷ್ಕೃತ ದರವು ಜನವರಿ 1 ರಿಂದ ಜಾರಿಗೆ ಬರಲಿದ್ದು, ಮಾರ್ಚ್ 31ರವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.

ನಿನ್ನೆಯಷ್ಟೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಇಂಧನ ಸಚಿವ ಸುನಿಲ್ ಕುಮಾರ್ ಅವರು, ಬೆಸ್ಕಾಂ‌ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತ ಮಾಡುವ ನಿರ್ಧಾರ ತೆಗದುಕೊಳ್ಳಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 37 ಪೈಸೆ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 39 ಪೈಸೆ ಕಡಿತ ಮಾಡಲಾಗಿದ್ದು, ಇದರ ಪ್ರಯೋಜನ ನೇರವಾಗಿ ಗ್ರಾಹಕರಿಗೆ ಲಭಿಸಲಿದೆ ಎಂದು ಹೇಳಿದ್ದರು.

ಇತ್ತೀಚೆಗಷ್ಟೇ ಇಂಧನ ಹೊಂದಾಣಿಕೆಯ ಶುಲ್ಕವನ್ನು ಪರಿಸ್ಕರಿಸಿ ಆದೇಶ ಹೊರಡಿಸಲಾಗಿತ್ತು. ಇದರಿಂದ ವಿದ್ಯುತ್‌ ದರ ಏರಿಕೆಯಾಗಿ ಗ್ರಾಹಕರಿಗೆ ಹೊರೆಯಾಗಿತ್ತು. ಈ ವೇಳೆ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದರು.

SCROLL FOR NEXT