ರಾಜ್ಯ

ರಾಜ್ಯದಲ್ಲಿ ಮುಂಗಾರು ಕ್ಷೀಣ: ಜಲ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ

Nagaraja AB

ಬೆಂಗಳೂರು: ನೈರುತ್ಯ ಮುಂಗಾರುವಿನ ಆರಂಭದ ತಿಂಗಳು ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜ್ಯದಲ್ಲಿ ಜಲ , ಶಾಖೋತ್ಪನ್ನ ಮತ್ತು ಪರ್ಯಯಾ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ, ಇದು ಹೆಚ್ಚಾಗಿ ಜಲವಿದ್ಯುತ್ ಹಾಗೂ ಶಾಖೋತ್ಪನ್ನ ವಿದ್ಯುತ್ ಮೇಲೆ ಅವಲಂಬಿತವಾಗಿದೆ.

ಮುಂಗಾರು ಪೂರ್ವ ಮೇ ತಿಂಗಳಲ್ಲಿ ಕಾವೇರಿ ಮತ್ತು ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿನ ಜಲಾಶಯಗಳಲ್ಲಿ ಉತ್ತಮ ನೀರಿನ ಸಂಗ್ರಹವಿತ್ತು. ಆದರೆ, ಮುಂಗಾರು ಆರಂಭದ ನಂತರ ಮಳೆಯಲ್ಲಿ ಕೊರತೆಯಾಗಿದೆ. ಜೂನ್ ತಿಂಗಳಲ್ಲಿ  31 ಜಿಲ್ಲೆಗಳ ಪೈಕಿ ಸುಮಾರು ಅರ್ಧದಷ್ಚು ದಿಲ್ಲೆಗಳಲ್ಲಿ ತೀವ್ರ ಮಳೆಯ ಕೊರತೆಯಾಗಿದೆ.

ಜೂನ್ 1 ರಿಂದ 30ರವರೆಗೂ ರಾಜ್ಯದಲ್ಲಿ ಕೇವಲ 145 ಎಂ ಎಂ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಹೇಳಿದೆ. 13 ಪ್ರಮುಖ ಜಲಾಶಯಗಳ ಪೈಕಿ ಲಿಂಗನಮಕ್ಕಿ, ಸೂಪಾ ಮತ್ತು ವರಾಹ ಜಲವಿದ್ಯುತ್ ಕೇಂದ್ರಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಒಳಹರಿವು ಗಣನೀಯವಾಗಿ ಕುಸಿದಿದ್ದು, ಕೇವಲ ಶೇ. 30 ರಷ್ಟು ಸಂಗ್ರಹವಿದೆ. ಕಳೆದ ವರ್ಷ ರಾಜ್ಯ ಜಲವಿದ್ಯುತ್ ಮೇಲೆ ಹೆಚ್ಚಾಗಿ ಅವಲಂಬಿತವಾಗಿದ್ದ ಕಾರಣ ಜಲಾಶಯಗಳಲ್ಲಿ ಸಂಗ್ರಹ ಕಡಿಮೆಯಾಗಿದೆ ಎಂದು ಕೆಎಸ್ ಎನ್ ಡಿಎಂಸಿ ತಜ್ಞರು ಹೇಳುತ್ತಾರೆ.

ಕೆಪಿಟಿಸಿಎಲ್ ಪ್ರಕಾರ, ಶರವತಿ (ಲಿಂಗನಮಕ್ಕಿ) ವರಾಹ ಮತ್ತು ಸೂಪಾದಲ್ಲಿ ಕೇವಲ 392 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇವುಗಳ ಸಾಮರ್ಥ್ಯ 1,595 ಮೆಗಾ ವ್ಯಾಟ್ ಇದೆ. ಜಲಾಶಯಗಳಲ್ಲಿನ ನೀರಿನ ಕೊರತೆಯೇ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಮಳೆಯಾಗದಿದ್ದಲ್ಲಿ ಪರಿಸ್ಥಿತಿ ಭೀಕರವಾಗಲಿದೆ. ಒಟ್ಟಾರೇ ರಾಜ್ಯದಲ್ಲಿ ಸುಮಾರು 6,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಜಲ ಮೂಲದಿಂದ ಕೇವಲ ಶೇ. 30 ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಒಂದು ವೇಳೆ ಮಳೆಯಾಗದಿದ್ದಲ್ಲಿ ಸಮಸ್ಯೆ ಎದುರಾಗಲಿದೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

SCROLL FOR NEXT