ರಾಜ್ಯ

ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ಅನ್ಯ ಕೋಮಿನ ನಡುವೆ ಘರ್ಷಣೆ: ಮೂವರಿಗೆ ಗಾಯ, ನಿಷೇಧಾಜ್ಞೆ ಜಾರಿ

Sumana Upadhyaya

ಬಾಗಲಕೋಟೆ: ಹಿಂದೂ-ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ನಡೆದು ಉಂಟಾದ ಉದ್ವಿಗ್ನ ಪರಿಸ್ಥಿತಿಯಿಂದ ಸ್ಥಳದಲ್ಲಿ ಸದ್ಯ ಸೆಕ್ಷನ್ 144 ಜಾರಿ ಮಾಡಲಾಗಿದೆ. ಸದ್ಯ ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ಸೆಕ್ಷನ್ 144 ನಿಷೇಧ ನಾಳೆ ಅಂದರೆ ಜುಲೈ 8ರ ರಾತ್ರಿ 8ರವರೆಗೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ತಿಳಿಸಿದ್ದಾರೆ.ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ನಡೆದ ಘಟನೆಯೇನು? ನಿನ್ನೆ ಅಂದರೆ ಜುಲೈ 6ರಂದು ಹಿಂದೂ-ಮುಸ್ಲಿಂ ಕೋಮಿನ ಜನರ ನಡುವೆ ಗಲಾಟೆ ಮೂವರು ಗಾಯಗೊಂಡಿದ್ದಾರೆ. ಗುಂಪು ಘರ್ಷಣೆಯಲ್ಲಿ ಗಾಯಗೊಂಡವರನ್ನು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರಣ್‌ ಮತ್ತು ಆತನ ಸಹೋದರ ಹಾಗೂ ಯಮನೂರು ಎಂದು ಗುರುತಿಸಲಾಗಿದೆ.

ಕೆರೂರು ಪಟ್ಟಣದ ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಚುಡಾಯಿಸಿದ್ದ ವಿಚಾರಕ್ಕೆ ಕೆಲ ಯುವಕರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯೇ ತೀವ್ರ ಸ್ವರೂಪ ಪಡೆದುಕೊಂಡಿತು ಎಂದು ತಿಳಿದುಬಂದಿದೆ.. ಈ ಘಟನೆ ಬೆನ್ನಲ್ಲೇ ಕೆಲವರು ತಳ್ಳುವ ಗಾಡಿಗಳಿಗೆ ಬೆಂಕಿ ಹಚ್ಚಿದ್ದಾರೆ.

ಮೂವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಕೆರೂರ ಪಟ್ಟಣಕ್ಕೆ ಎಸ್ ಪಿ ಜಯಪ್ರಕಾಶ್ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳಾದ ಪಿ.ಸುನಿಲ್ ಕುಮಾರ್ ಸಹ ಗುಂಪು ಘರ್ಷಣೆಯ ಸಂಪೂರ್ಣ ಮಾಹಿತಿ ಪಡೆದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.

ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ: ಇತ್ತ ಘಟನೆ ಬೆನ್ನಲ್ಲೇ ಕೆಲ ಕಿಡಿಗೇಡಿಗಳ ಗುಂಪು ಮಾರುಕಟ್ಟೆ ಮೇಲೆ ಕಲ್ಲು ತೂರಾಟ ನಡೆಸಿ, ಅಂಗಡಿಗಳ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಿ ಜಖಂಗೊಳಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಶುಕ್ರವಾರದವರೆಗೆ ಎಲ್ಲಾ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ.

ಘರ್ಷಣೆಗೆ ಸಂಬಂಧಿಸಿದಂತೆ ಎರಡು ಗುಂಪಿನ ಹತ್ತಕ್ಕೂ ಹೆಚ್ಚು ಜನರನ್ನು ಕೆರೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಾಗಲಕೋಟೆ ಉಪವಿಭಾಗದ ವಿವಿಧ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಸದ್ಯಕ್ಕೆ ಇಡೀ ಕೆರೂರ ಪಟ್ಟಣ ಪೊಲೀಸರ ಸರ್ಪಗಾವಲಿನಲ್ಲಿದೆ.

SCROLL FOR NEXT