ರಾಜ್ಯ

ಕವಿ ಸರ್ವಜ್ಞ ಹುಟ್ಟೂರಿನ ಮನೆ, ಸಮಾಧಿ ಸ್ಥಳ ಅಭಿವೃದ್ಧಿಗೆ ಸರ್ಕಾರದ ಅನುಮೋದನೆ

Shilpa D

ಬೆಂಗಳೂರು: ಕವಿ ಸರ್ವಜ್ಞನ ಹುಟ್ಟೂರಾದ ಹಾವೇರಿ ಜಿಲ್ಲೆಯ ಅಬಲೂರಿನಲ್ಲಿ ಅವರ ತಂದೆ ತಾಯಿಯ ಹೆಸರಿನಲ್ಲಿ ಕಟ್ಟಡ ನಿರ್ಮಾಣ ಹಾಗೂ ಮಾಸೂರಿನ ಸಮಾಧಿ ಸ್ಥಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ನೀಡಿದೆ.

ಇದರ ಜೊತೆಗೆ ಹಿರೇಕೆರೂರು ಪಟ್ಟಣದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಬಲೂರಿನಲ್ಲಿ ಅವರು ವಾಸವಿದ್ದ ಮನೆಯ ಸ್ಥಳ ಹಾಗೂ ಮಾಸೂರಿನ ಸಮಾಧಿ ಸ್ಥಳ ಅಭಿವೃದ್ಧಿಗೆ ಅಗತ್ಯವಿರುವ ಖಾಸಗಿ ಜಮೀನು ಖರೀದಿಸಲು ಒಪ್ಪಿಗೆ ನೀಡಲಾಯಿತು.

ಇದರೊಂದಿಗೆ ಸರ್ವಜ್ಞ ಪ್ರಾಧಿಕಾರದಿಂದ 25 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮುಖಾಂತರ ಕೈಗೊಳ್ಳುವಂತೆ ಸೂಚಿಸಿದರು. ಇದರೊಂದಿಗೆ ಸರ್ವಜ್ಞರ ನೆನಪಿಗೆ ರೂಪಿಸುವ ಯೋಜನೆಗಳನ್ನು ಅರ್ಥಪೂರ್ಣವಾಗಿ ಹಾಗೂ ಆಯಾ ವಿಷಯಗಳ ಪರಿಣತರೊಂದಿಗೆ ಸಮಾಲೋಚನೆ ನಡೆಸಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಶಿಥಿಲಾವಸ್ಥೆಯಲ್ಲಿದ್ದ ಸವಣೂರು ನವಾಬರ ಅರಮನೆ ಪುನರುಜ್ಜೀವನ ಕಾರ್ಯ ಪೂರ್ಣಗೊಂಡಿದ್ದು, ಇಲ್ಲಿ ಸ್ಥಳೀಯ ಇತಿಹಾಸವನ್ನು ನೆನಪಿಸುವ ವಸ್ತುಸಂಗ್ರಹಾಲಯ ಸ್ಥಾಪಿಸಲು ಮುಖ್ಯಮಂತ್ರಿಗಳು ಸೂಚಿಸಿದರು.ಆರು ತಿಂಗಳಲ್ಲಿ ವಸ್ತು ಸಂಗ್ರಹಾಲಯದ ಕೆಲಸ ಪೂರ್ಣಗೊಳಿಸುವಂತೆ ತಿಳಿಸಿದರು.

ಬಸವಣ್ಣನವರ ಐಕ್ಯಸ್ಥಳವಾಗಿರುವ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮವು ಜನಾಕರ್ಷಣೆಯ ಕೇಂದ್ರವಾಗುವ ಜತೆಗೆ ಬಸವ ತತ್ವದ ಅರಿವು ಮೂಡಿಸುವ ತಾಣವೂ ಆಗಬೇಕು. ಇದಕ್ಕೆ ಪೂರಕವಾಗಿ ಸಂಗಮವನ್ನು ಅಭಿವೃದ್ಧಿ ಪಡಿಸಿ ಎಂದು ಸಿಎಂ ಸೂಚಿಸಿದ್ದಾರೆ.

SCROLL FOR NEXT