ರಾಜ್ಯ

ಪ್ರತಿ ಬಡವನ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾನೂನು ರೂಪಿಸಲು ತೀರ್ಮಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Srinivas Rao BV

ಬೆಂಗಳೂರು: ವಿದ್ಯುಚ್ಛಕ್ತಿ ಸಂಪರ್ಕ ಕೋರಿ ಅರ್ಜಿ ಸಲ್ಲಿಸುವ ಪ್ರತಿ ಬಡವ ಕಟ್ಟುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾನೂನನ್ನು ರೂಪಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವತಿಯಿಂದ ‘ನಿಗಮದ 53ನೇ ಸಂಸ್ಥಾಪನಾ ದಿನಾಚರಣೆ-2022’ ರ ಉದ್ಘಾಟಿಸಿ ಮಾತನಾಡಿದರು. 

ಕನಿಷ್ಠ ವಿದ್ಯುಚ್ಛಕ್ತಿಯ ಸೌಲಭ್ಯದಿಂದ ಯಾರೂ ವಂಚಿತರಾಗಬಾರದು

ವಿದ್ಯುತ್ ಸರಬರಾಜು ಅಗತ್ಯ ಸೇವೆಗಳಲ್ಲಿ ಒಂದು.  ಈಗಿನ ಕಾಲದಲ್ಲಿ ವಿದ್ಯುತ್ ಇಲ್ಲದೇ ಯಾರೂ ಬದುಕುವುದು ಸಾಧ್ಯವಿಲ್ಲ. ಕುಡಿಯುವ ನೀರು ಕೊಟ್ಟಂತೆಯೇ ವಿದ್ಯುತ್ ನೀಡುವುದು ಸರ್ಕಾರದ ಜವಾಬ್ದಾರಿ. ಜನರು ದೈನಂದಿನ ಬದುಕಿಗೆ ಅಗತ್ಯವಾಗಿ ಬೇಕಾದ ಕನಿಷ್ಟ ವಿದ್ಯುತ್ಛಕ್ತಿಯಿಂದ ವಂಚಿತರಾಗಬಾರದೆಂಬುದು ಸರ್ಕಾರದ ಮಾನವೀಯ ಕಳಕಳಿ. ವಿದ್ಯುತ್ ಪೂರೈಕೆ ಎನ್ನುವುದು ಅಗತ್ಯ ಸೇವೆಗಳಲ್ಲೊಂದಾಗಿದ್ದು, ಅದು ಜನರ ಹಕ್ಕಾಗಿದೆ. ಕಾರ್ಖಾನೆಗಳಿಗೆ ಅವಶ್ಯವಾಗಿ ಸರಬರಾಜಾಗುವಂತೆ ಜನರಿಗೂ ವಿದ್ಯುತ್ ಸೌಲಭ್ಯ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸೂಕ್ತ ಆದೇಶವನ್ನು ಹೊರಡಿಸಲು ಸೂಚಿಸಲಾಗಿದೆ. ಕಾನೂನುಗಳು ಜನರ ಸುಗಮ ಜೀವನಕ್ಕೆ ಅನುವಾಗುವಂತೆ ಇರಬೇಕು. ರಾಜ್ಯದ.ವೈಜ್ಞಾನಿಕ ಚಿಂತನೆಯಿಂದ ವಿದ್ಯುತ್ ಉತ್ಪಾದನೆ ಹಾಗೂ ನಿರ್ವಹಣೆಯನ್ನು ಮಾಡಬೇಕು ಎಂದರು.

ದೇಶದ ಶೇ.43 ರಷ್ಟು ಸೌರಶಕ್ತಿ ಕರ್ನಾಟಕದಲ್ಲಿ ಉತ್ಪಾದನೆ

ಕರ್ನಾಟಕ ವಿದ್ಯುತ್ ನಿಗಮ ಕರ್ನಾಟಕದ ಬೆಳಕು. 70 ರ ದಶಕಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಕೊಂಡು ರಾಜ್ಯದ ವಿದ್ಯುತ್ ವಲಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿದ್ಯುತ್ ಉತ್ಪಾದನೆಯಲ್ಲಿ ಪ್ರಾಕೃತಿಕ ಹಾಗೂ ಕಾಮಗಾರಿಯಲ್ಲಿನ ಸವಾಲುಗಳನ್ನು ಎದುರಿಸಿ ಕರ್ತವ್ಯ ನಿರ್ವಹಿಸುವ ಇಂಜಿನಿಯರ್‍ಗಳು, ಕಾರ್ಮಿಕರನ್ನು ಇಂದು ನೆನೆಯಲೇಬೇಕು. ಸವಾಲುಗಳನ್ನು ಎದುರಿಸಿ ವಿದ್ಯುತ್ ಯೋಜನೆಗಳನ್ನು ಸಾಕಾರಗೊಳಿಸುವ ಎಲ್ಲ ಇಂಜಿನಿಯರ್‍ಗಳನ್ನು ಅಭಿನಂದಿಸುತ್ತೇನೆ. ಥರ್ಮಲ್ ವಿದ್ಯುತ್ ಉತ್ಪಾದನೆಯ ತಂತ್ರಜ್ಞಾನದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. 30 ಸಾವಿರ ವಾಟ್ ವಿದ್ಯುತ್ ಉತ್ಪಾದನೆ ರಾಜ್ಯದಲ್ಲಾಗುತ್ತಿದೆ. ದೇಶದ ಶೇ.43 ರಷ್ಟು ಸೌರಶಕ್ತಿ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದೆ. ನವೀಕರಿಸಬಹುದಾದ ಇಂಧನ, ಸೌರಶಕ್ತಿ, ಜಲವಿದ್ಯುತ್ ಉತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ ಎಂದರು.

ವಿದ್ಯುತ್ ಸಂಗ್ರಹಣಾ ಘಟಕಗಳ ಸ್ಥಾಪನೆಗೆ ನೀತಿ

ಶರಾವತಿಯಲ್ಲಿ ವಿದ್ಯುತ್ ಸಂಗ್ರಹಣಾ ಘಟಕಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಖಾಸಗಿ ವಲಯದವರೂ ವಿದ್ಯುತ್‍ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ನೀತಿಯನ್ನು ರೂಪಿಸಲಾಗುತ್ತಿದೆ. ನವೀಕರಿಸಬಹುದಾದ ಇಂಧನವನ್ನು ಇಲ್ಲಿ ಬಳಸಲಾಗುತ್ತದೆ. ಹೈಡ್ರೋಜನ್ ಇಂಧನ ಉತ್ಪಾದನೆ, ಸಮುದ್ರದ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದರು. 

SCROLL FOR NEXT