ರಾಜ್ಯ

ಕೊಳೆಗೇರಿ ನಿವಾಸಿಗಳಿಗೆ 1 ಲಕ್ಷ ಮನೆ ನಿರ್ಮಾಣ: ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ ಮಿಷನ್‌ನ ಭಾಗವಾಗಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದರು.

ನಗರದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಈಗಾಗಲೇ 52 ಸಾವಿರ ಮನೆಗಳನ್ನು ನಿರ್ಮಿಸಲಾಗಿದ್ದು, ಉಳಿದ ಮನೆಗಳ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದ 1,588 ಮಂದಿ ರಾಜರಾಜೇಶ್ವರಿ ನಗರದಲ್ಲಿ ಪೂರ್ಣಗೊಂಡಿರುವ ಮನೆಗಳಲ್ಲಿ ವಾಸಿಸುತ್ತಿದ್ದಾರೆಂದು ಹೇಳಿದರು.

ದೇಶದಲ್ಲಿ ಬಡವರ ತಲೆಯ ಮೇಲೆ ಸೂರಿಲ್ಲ ಎನ್ನುವುದು ದೇಶವ್ಯಾಪಿ ಸಮಸ್ಯೆಯಾಗಿದೆ. ಇದನ್ನು ಹೋಲಾಡಿಸುವ ಪ್ರಯತ್ನ ರಾಜ್ಯದಲ್ಲಿ ಆಗುತ್ತಿದ್ದು, ಬಡವರಿಗಾಗಿ 5 ಸಾವಿರ ಎಕರೆ ಸರ್ಕಾರಿ ಜಮೀನು ಮೀಸಲಿಡಲಾಗುತ್ತಿದೆ. ನಮ್ಮ ಸರ್ಕಾರ ಈಗ 5 ಲಕ್ಷ ಮನೆ ಪೂರ್ಣಗೊಳಿಸುತ್ತಿದೆ. ಕಟ್ಟಿರುವ ಮನೆಗಳನ್ನು ಪೂರ್ಣಗೊಳಿಸುವ ಸಂಕಲ್ಪವನ್ನು ನಮ್ಮ ಸರ್ಕಾರ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡುತ್ತಿದ್ದ 1.75 ಲಕ್ಷ ಮೊತ್ತವನ್ನು 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಜಮೀನಿನ ಸಮಸ್ಯೆ ಬಗೆಹರಿಸಲು 5,000 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದ್ದು, ಬಡವರಿಗಾಗಿ ಇದನ್ನು ಮೀಸಲಿಟ್ಟು, ಅಲ್ಲಿ ನಿವೇಶನ ಮತ್ತು ಮನೆ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಘೋಶಿಸಿದರು.

ರಾಜ್ಯ ಸರ್ಕಾರ ಈಗಾಗಲೇ 52 ಸಾವಿರ ಮನೆಗಳನ್ನು ಪೂರ್ತಿಗೊಳಿಸಿದೆ. ಇನ್ನೂ 50 ಸಾವಿರ ಮನೆಗಳಿಗೆ ಇದೇ ವರ್ಷಕ್ಕೆ ಕಾರ್ಯಾದೇಶ ನೀಡಿದ್ದೇವೆ. ಅಲ್ಲದೆ ಫಲಾನುಭವಿಗಳಿಂದ ವಂತಿಗೆ ಬರುವುದು ತಡವಾಗುತ್ತಿದ್ದು, ಅವುಗಳನ್ನು ಪೂರ್ಣ ಮಾಡಲು ತಡವಾಗುತ್ತಿದೆ ಎಂಬುದನ್ನು ಸರ್ಕಾರ ಮನಗಂಡಿದ್ದು, ಅದಕ್ಕಾಗಿ ಬಡವರ ಪರವಾಗಿ ಬ್ಯಾಂಕುಗಳಿಗೆ ಸರ್ಕಾರ ಗ್ಯಾರಂಟಿ ನೀಡಿ 500 ಕೋಟಿ ರೂ.ಗಳನ್ನು ಸಾಲ ಪಡೆಯಲು ಮುಂದಾಗುತ್ತಿದೆ. ಇದರಿಂದ ಸಮಸ್ಯೆಗೂ ಪರಿಹಾರ ನೀಡಿದಂತಾಗುತ್ತದೆ. ಮನೆ ಪೂರ್ತಿಯಾದಾಗ ಕಂತಿನಲ್ಲಿ ನೀಡುವ ವ್ಯವಸ್ಥೆ ಮಾಡುತ್ತೇವೆ. ಬಡವರಿಗೆ ಸಹಾಯ ಮಾಡಲು ಎಲ್ಲೆಲ್ಲಿ ಸಾಧ್ಯವಿದೆಯೋ ಅದನ್ನು ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದರು.

ರಸ್ತೆ ಅಭಿವೃದ್ಧಿ ಸೇರಿದಂತೆ ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ನಗರದಲ್ಲಿ ವಾಸಿಸುವ ಹೆಚ್ಚಿನ ಸಂಖ್ಯೆಯ ಜನರಿಗೆ ಅವಕಾಶ ಕಲ್ಪಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ. ವಿಶೇಷ ಕಾರ್ಯಪಡೆಯೊಂದಿಗೆ ನಗರದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ವಶಪಡಿಸಿಕೊಳ್ಳಲಾಗುವುದು, ಅಂತಹ ಮನೆಗಳಲ್ಲಿ ವಾಸಿಸುವ ಬಡವರಿಗೆ ಪರ್ಯಾಯವಾಗಿ ಮನೆಗಳನ್ನು ಒದಗಿಸಲಾಗುತ್ತದೆ. ಜತೆಗೆ ರಸ್ತೆ ಅಭಿವೃದ್ಧಿಗೆ 3 ಸಾವಿರ ಕೋಟಿ ಹಾಗೂ ರಾಜಕಾಲುವೆಗಳ ಅಭಿವೃದ್ಧಿಗೆ 1600 ಕೋಟಿ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ರಾಜಕೀಯಕ್ಕಿಂತ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕಿದೆ, ಪೆರಿಫೆರಲ್ ರಿಂಗ್ ರಸ್ತೆ, ವಿವಿಧ ಮೆಟ್ರೊ ಮಾರ್ಗದ ಕಾಮಗಾರಿ ಸೇರಿದಂತೆ ಹಲವು ಭರವಸೆಯ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

SCROLL FOR NEXT