ರಾಜ್ಯ

ಸೇನಾ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್

Nagaraja AB

ಬೆಂಗಳೂರು: ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ರಾಷ್ಟ್ರಪತಿ ಸೋಮವಾರ, ರಾಷ್ಟ್ರೀಯ ಮಿಲಿಟರಿ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಹೊಸ ಎತ್ತರಕ್ಕೆ ತಲುಪುತ್ತಿರುವುದು ಹಾಗೂ ಹೊಸ ದಾಖಲೆಗಳನ್ನು ಮಾಡುತ್ತಿರುವುದಕ್ಕೆ ಶ್ಲಾಘಿಸಿದರು.  

ಸುಪ್ರೀಂ ಕಮಾಂಡರ್ ಆಗಿ, ಯುದ್ಧದಲ್ಲಿ ಪಾತ್ರಗಳು ಸೇರಿದಂತೆ ಸಶಸ್ತ್ರ ಪಡೆಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಸಂಖ್ಯೆಯನ್ನು ನೋಡಲು ನನಗೆ ಸಂತೋಷವಾಗಿದೆ. ಇತ್ತೀಚೆಗೆ ಕ್ಯಾಪ್ಟನ್ ಅಭಿಲಾಷಾ ಬರಾಕ್ ಅವರು ಸೇನಾ ವಿಮಾನಯಾನ ದಳಕ್ಕೆ ಯುದ್ಧ ಏವಿಯೇಟರ್ ಆಗಿ ಸೇರಿದ ಮೊದಲ ಮಹಿಳಾ ಅಧಿಕಾರಿಯಾಗಿರುವುದು ಸಂತಸವನ್ನುಂಟು ಮಾಡಿದೆ ಎಂದರು.

ಸೇನಾ ಸಿಬ್ಬಂದಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರಾಷ್ಟ್ರೀಯ ಮಿಲಿಟರಿ ಶಾಲೆಗಳನ್ನು ಕಲ್ಪಿಸಲಾಗಿದೆ . ಈ ಶೈಕ್ಷಣಿಕ ವರ್ಷದಿಂದ ದೇಶಾದ್ಯಂತ  ಈ ಶಾಲೆಗಳಿಗೆ ಬಾಲಕಿಯರ ಕೆಡೆಟ್‌ಗಳು ಪ್ರವೇಶ ಪಡೆಯಲಿದ್ದಾರೆ ಎಂದು ತಿಳಿದು ಸಂತೋಷವಾಗಿದೆ ಎಂದು ಹೇಳಿದರು. ಈ ವರ್ಷದಿಂದ, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಬಾಗಿಲುಗಳನ್ನು ಹೆಣ್ಣು ಮಕ್ಕಳಿಗೂ  ತೆರೆಯಲಾಗಿದೆ. ಈ ಪ್ರತಿಷ್ಠಿತ ಶಾಲೆಗೆ ಸೇರುವ ಹೆಣ್ಣು ಮಕ್ಕಳು ರಾಷ್ಟ್ರವನ್ನು ರಕ್ಷಿಸುವಲ್ಲಿ ಕೊಡುಗೆ ನೀಡುತ್ತಾರೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಇದಲ್ಲದೆ, ಕರ್ನಾಟಕವು ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ ಮತ್ತು ಇತ್ತೀಚಿನ ಇಂಡಿಯಾ ನಾವಿನ್ಯತಾ ಸೂಚ್ಯಂಕ'ದಲ್ಲಿ ರಾಜ್ಯವು ಎಲ್ಲಾ ರಾಜ್ಯಗಳಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಬೆಂಗಳೂರು ಕಲಿಕೆ, ತಂತ್ರಜ್ಞಾನ ಮತ್ತು ಉದ್ಯಮದ ಜಾಗತಿಕವಾಗಿ ಹೋಲಿಸಬಹುದಾದ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.

SCROLL FOR NEXT