ರಾಜ್ಯ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ: ಒಂದೇ ದಿನ 615 ಮಂದಿಗೆ ಸೋಂಕು, ಹೆಚ್ಚಿದ ಆತಂಕ

Manjula VN

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದು, ಬುಧವಾರ ಒಂದೇ ದಿನ ಬರೋಬ್ಬರಿ 615 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ನಗರದ ಜನರಲ್ಲಿ ಮಹಾಮಾರಿ ಕುರಿತು ಆತಂಕ ಹೆಚ್ಚಾಗುವಂತೆ ಮಾಡಿದೆ.

ಮಂಗಳವಾರವಷ್ಟೇ ಬಿಬಿಎಂಪಿ ವ್ಯಾಪ್ತಿಯ ಎರಡು ಶಾಲೆಗಳಲ್ಲಿ ಕೋವಿಡ್ ಕ್ಲಸ್ಟರ್ ಪತ್ತೆಯಾಗಿತ್ತು. ಇದಾದ ಒಂದೇ ದಿನದಲ್ಲಿ ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ.

ಈ ನಡುವೆ ಪಾಲಿಕೆಯ ಹಿರಿಯ ಅಧಿಕಾರಿಗಳು ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ. ಸೋಂಕು ಹೆಚ್ಚಾಗುತ್ತಿರುವುದರ ಜೊತೆಗೆ ಗುಣಮುಖರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಬುಧವಾರ ಒಂದೇ ದಿನ ನಗರದಲ್ಲಿ 509 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆಂದು ತಿಳಿಸಿದ್ದಾರೆ.

ಕಳೆದ ವಾರ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದು, ಈ ಸಂಬಂಧ ವಾರ್ಡ್ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ದೈನಂದಿನ ಪರೀಕ್ಷೆಗಳ ಸಂಖ್ಯೆಯನ್ನು 16 ಸಾವಿರದಿಂದ 20 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ ಕಳೆದ 7 ದಿನಗಳಲ್ಲಿ ಬೆಳ್ಳಂದೂರಿನಲ್ಲಿ 54, ದೊಡ್ಡನೆಕ್ಕುಂದಿಯಲ್ಲಿ 25, ವರ್ತೂರಿನಲ್ಲಿ 24, ಕಾಡುಗೋಡಿಯಲ್ಲಿ 16 ಮತ್ತು ಹಗದೂರಿನಲ್ಲಿ 15 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬಿಬಿಎಂಪಿ ನಗರದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿತ್ತು, ಅಲ್ಲದೆ, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ತಿಳಿಸಿತ್ತು.

SCROLL FOR NEXT