ರಾಜ್ಯ

ಕೌಟುಂಬಿಕ ಕಲಹ: ನಟ ಸತೀಶ್ ವಜ್ರ ಬರ್ಬರ ಹತ್ಯೆ

Manjula VN

ಬೆಂಗಳೂರು: 'ಲಗೋರಿ' ಟೆಲಿಫಿಲ್ಮ್ ಮೂಲಕ ಜನಪ್ರಿಯತೆ ಸಂಪಾದಿಸಿದ್ದ ನಟ ಸತೀಶ್ ಅಲಿಯಾಸ್‌ ಸತೀಶ್‌ ವಜ್ರ (32) ಹತ್ಯೆಯಾಗಿದ್ದು, ಹತ್ಯೆಗೆ ಕೌಟುಂಬಿಕ ಕಲಹ ಕಾರಣವೆಂದು ಹೇಳಲಾಗುತ್ತಿದೆ. 

ಪಟ್ಟಣಗೆರೆಯ ಬಾಡಿಗೆ ಮನೆಯಲ್ಲಿ ಸತೀಶ್‌ ಒಬ್ಬರೇ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಅವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದು, ಶನಿವಾರ ಬೆಳಗ್ಗೆ ಈ ವಿಚಾರ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ರಾಜರಾಜೇಶ್ವರಿನಗರ ಠಾಣೆ ಪೊಲೀಸರು, ಸತೀಶ್‌ ಕೊಲೆ ಮಾಡಿದ ಆತನ ಬಾಮೈದ ಸುದರ್ಶನ್‌, ಸಹಚರ ನಾಗೇಂದ್ರನನ್ನು ಬಂಧಿಸಿದ್ದಾರೆ.

ಸತೀಶ್ ಅವರು ಮಂಡ್ಯ ಪ್ರಜ್ವರ್ ದೇವರಾಜ್ ಫ್ಯಾನ್ಸ್ ಅಸೋಸಿಯೇಷನ್'ನ ಅಧ್ಯಕ್ಷರಾಗಿದ್ದು, ಸಲೂನ್ ವೊಂದನ್ನು ನಡೆಸುತ್ತಿದ್ದರು. ಹಲವಾರು ನಟರು ಇವರ ಸಲೂನ್'ಗೆ ಬರುತ್ತಿದ್ದರು. ಕೆಲ ತಿಂಗಳುಗಳ ಹಿಂದಷ್ಟೇ ಸತೀಶ್ ಅವರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಹತ್ಯೆಯ ಹಿಂದೆ ಪತ್ನಿಯ ಸಾವು ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಸತೀಶ್ ಅವರ ಪತ್ನಿ ಸಾವನ್ನಪ್ಪಿದ ಬಳಿಕ ಪತ್ನಿಯ ಕುಟುಂಬ ಹಾಗೂ ಸತೀಶ್ ನಡುವೆ ಮಗುವಿನ ಪಾಲನೆ ಕುರಿತು ಜಗಳಗಳಾಗಿತ್ತು. ಸತೀಶ್ ಪತ್ನಿ ಪೋಷಕರು ಮಗುವನ್ನು ತಮಗೆ ಬಿಟ್ಟುಕೊಡುವಂತೆ ಕೇಳಿದ್ದು, ಇದಕ್ಕೆ ಸತೀಶ್ ಒಪ್ಪಿಲ್ಲ. ಇದೇ ವಿಚಾರವಾಗಿ ಬಾಮೈದ ಸುದರ್ಶನ್ ಹಾಗೂ ಸತೀಶ್ ಮಧ್ಯೆ ಗಲಾಟೆಗಳು ನಡೆದಿದ್ದವು.
 
ಬದುಕಿದ್ದಾಗ ಅಕ್ಕನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಈಗ ಮಗನಿಗಾಗಿ ತೊಂದರೆ ಕೊಡುತ್ತಿದ್ದಾನೆಂದು ಸುದರ್ಶನ್ ಕೆಂಡಾಮಂಡಲಗೊಂಡಿದ್ದ. ಇದರಂದೆ ಭಾವ ಸತೀಶ್ ಹತ್ಯೆಗೆ ನಿರ್ಧರಿದ್ದ. ಸುದರ್ಶನ್ ಅವರಿಗೆ ಸ್ನೇಹಿತ ನಾಗೇಂದ್ರ ಕೂಡ ಸಾಥ್ ನೀಡಿದ್ದಾರೆ. ಪೂರ್ವ ನಿಯೋಜಿತದಂತೆ ಮದ್ದೂರಿನಿಂದ ನಗರಕ್ಕೆ ಬಂದಿರುವ ಆರೋಪಿಗಳು ಸತೀಶ್ ಮನೆಗೆ ನುಗ್ಗಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ. 

ಕಳೆದ 3 ವರ್ಷಗಳಿಂದ ಸತೀಶ್ ಇದೇ ಕಟ್ಟಡ ಮನೆಯಲ್ಲಿ ವಾಸವಿದ್ದು, ಮತ್ತೊಬ್ಬ ಬಾಡಿಗೆದಾರ ಮನೆಗೆ ಹೋಗುವ ಮಾರ್ಗದಲ್ಲಿ ರಕ್ತದ ಹನಿಗಳು ಬಿದ್ದಿರುವುದನ್ನು ನೋಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕಟ್ಟಡದ ಮಾಲೀಕರು ತಮ್ಮ ಬಳಿಯಿದ್ದ ಮತ್ತೊಂದು ಬೀಗದ ಕೈಯಿಂದ ಮನೆಯ ಬಾಗಿಲು ತೆಗೆದು ನೋಡಿದಾಗ ರಕ್ತದ ಮಡುವಿನಲ್ಲಿ ಸತೀಶ್ ಬಿದ್ದಿರುವುದು ಕಂಡು ಬಂದಿದೆ. ಬಳಿಕ ಕಟ್ಟಡದ ಮಾಲೀಕರು ಕೊಲೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

SCROLL FOR NEXT