ರಾಜ್ಯ

ಮಂಗಳೂರು: ಸಿಬಿಐ ದಾಳಿಯಲ್ಲಿ ಬಂಧನಕ್ಕೊಳಗಾಗಿದ್ದ ಮಂಗಳೂರಿನ ರೈಲ್ವೇ ಇಲಾಖೆ ಸಿಬ್ಬಂದಿ ಶವ ಪತ್ತೆ

Shilpa D

ಮಂಗಳೂರು: ಸಿಬಿಐ ದಾಳಿಯಲ್ಲಿ ಬಂಧನಕ್ಕೊಳಗಾಗಿದ್ದ ಮಂಗಳೂರಿನ ರೈಲ್ವೇ ಇಲಾಖೆ ಸಿಬ್ಬಂದಿಯ ಶವ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಂಗಳೂರು ಹೊರವಲಯದ ತೊಕ್ಕೊಟ್ಟು ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ.

ಮಂಗಳೂರು ರೈಲ್ವೇ ನಿಲ್ದಾಣ ಬಳಿಯ ರೈಲ್ವೇ ಆಸ್ಪತ್ರೆ ಫಾರ್ಮಸಿಸ್ಟ್ ವಿಜಯನ್ ಶವ ಪತ್ತೆಯಾಗಿದ್ದು, ರೈಲ್ವೇ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದೆ. ಆದರೆ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಮಂಗಳೂರಿನ ರೈಲ್ವೇ ಆಸ್ಪತ್ರೆಗೆ ಬೆಂಗಳೂರಿನ ಸಿಬಿಐ ಟೀಂ ದಾಳಿ ನಡೆಸಿತ್ತು. ರೈಲ್ವೇ ನೌಕರರಿಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡುತ್ತಿದ್ದ ಆರೋಪದಡಿ ದಾಳಿ ನಡೆಸಲಾಗಿದ್ದು, ದಾಳಿ ನಡೆಸಿ ಆಸ್ಪತ್ರೆ ಫಾರ್ಮಸಿಸ್ಟ್ ವಿಜಯನ್ ಹಾಗೂ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಿತ್ತು ಮಾಡಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ವಿಜಯನ್ ಶವ ಇಂದು ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ರೈಲ್ವೇ ಪೊಲೀಸ್ ಮತ್ತು ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ರೈಲ್ವೇ ನೌಕರರು ಪ್ರತೀ ವರ್ಷ ದೈಹಿಕ ಕ್ಷಮತೆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು.‌ ಆದರೆ ವಿಜಯನ್ ಮತ್ತು ತಂಡ ಈ ಪ್ರಮಾಣ ಪತ್ರವನ್ನ ಹಣ ಪಡೆದು ತಯಾರಿಸಿಕೊಡುತ್ತಿದ್ದ ಆರೋಪ ಮಾಡಲಾಗಿದೆ.

ನಕಲಿ ವೈದ್ಯಕೀಯ ಪ್ರಮಾಣ ಪತ್ರ ಸಂಬಂಧ ಕೇಂದ್ರ ರೈಲ್ವೇ ವಿಭಾಗದಿಂದ ಸಿಬಿಐ ತಂಡಕ್ಕೆ ಮಾಹಿತಿ ಬಂದಿತ್ತು. ಈ ಬಗ್ಗೆ ಪರಿಶೀಲಿಸಿದಾಗ ದೇಶದ ಹಲವು ರೈಲ್ವೇ ಆಸ್ಪತ್ರೆಗಳಲ್ಲಿ ನಕಲಿ ಸರ್ಟಿಫಿಕೇಟ್ ನೀಡಿರುವುದು ಬೆಳಕಿಗೆ ಬಂದಿದೆ. ಅದರಂತೆ ಮಂಗಳೂರು ಕೇಂದ್ರದಲ್ಲೂ ನಕಲಿ ಸರ್ಟಿಫಿಕೇಟ್ ನೀಡಿರೋದು ಪತ್ತೆಯಾಗಿತ್ತು, ಅದರಂತೆ ಸಿಬಿಐ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿತ್ತು.

ರೈಲುಗಳಲ್ಲಿ ಕೆಲಸ ಮಾಡುವ ಫ್ಲಾಟ್ ಫಾರಂ ಸಿಬ್ಬಂದಿ, ರೈಲು ಚಾಲಕ, ಅಡುಗೆಯವರು, ಕ್ಲೀನಿಂಗ್ ಸಿಬ್ಬಂದಿ ಸೇರಿ ಎಲ್ಲರಿಗೂ ಈ ಸರ್ಟಿಫಿಕೇಟ್ ಸಲ್ಲಿಕೆ ಕಡ್ಡಾಯವಾಗಿದೆ. ಆದರೆ ಇವರೆಲ್ಲರಿಗೂ ಪರೀಕ್ಷೆ ನಡೆಸದೆ ಪ್ರಮಾಣ ಪತ್ರ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

SCROLL FOR NEXT