ರಾಜ್ಯ

ಮೋದಿ ಭೇಟಿ ವೇಳೆ ನಿರ್ಮಾಣ ಮಾಡಿದ್ದ 6 ಕೋಟಿ ರೂ. ವೆಚ್ಚದ ರಸ್ತೆ ಮೂರೇ ದಿನಕ್ಕೆ ಕುಸಿತ, ಸಮಗ್ರ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ!

Srinivasamurthy VN

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ರಾಜಧಾನಿ ಬೆಂಗಳೂರಿನಲ್ಲಿ 6 ಕೋಟಿ ರೂ ವೆಚ್ಚದಲ್ಲಿ ದಿಢೀರ್ ಅಭಿವೃದ್ದಿ ಪಡಿಸಲಾಗಿದ್ದ ರಸ್ತೆಯೊಂದು ಕೇವಲ ಮೂರೇ ದಿನಗಳಲ್ಲಿ ಕಿತು ಹೋಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಬೊಮ್ಮಾಯಿ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

33 ಸಾವಿರ ಕೋಟಿ ರೂ ಮೊತ್ತದ ಕಾಮಗಾರಿಗಳ ಉದ್ಘಾಟನೆಗಾಗಿ ಜೂನ್‌ 20ರಂದು ಪ್ರಧಾನಿ ಅವರು ಬೆಂಗಳೂರಿಗೆ ಬಂದಿದ್ದರು. ಪ್ರಧಾನಿ ಮೋದಿ ಸಾಗುವ ರಸ್ತೆ ಅಭಿವೃದ್ಧಿಗಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುಮಾರು 24 ಕೋಟಿ ರೂ ವೆಚ್ಚ ಮಾಡಿತ್ತು. ಈ ಪೈಕಿ ಜ್ಞಾನಭಾರತಿಯ ಡಾ.ಬಿ.ಆರ್. ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕಾನಮಿಕ್ಸ್‌ (ಬೇಸ್‌) ಕ್ಯಾಂಪಸ್‌ ಬಳಿ 6 ಕೋಟಿ ರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಇದೇ ರಸ್ತೆ ಇದೀಗ ಕುಸಿದು ಹೋಗಿದೆ. 

ರಸ್ತೆ ಕಿತ್ತು ಹೋದ ಕುರಿತು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಈ ಕುರಿತ ವರದಿ ಮತ್ತು ಫೋಟೋಗಳು ಇದೀಗ ವೈರಲ್ ಆಗಿವೆ. ‘ಪ್ರಧಾನಿ ಸಾಗಿದ ರಸ್ತೆಯ ಸ್ಥಿತಿ ನೋಡಿ. ಇದು ಬಿಬಿಎಂಪಿಯ ಕಳಪೆ ಕಾಮಗಾರಿಗೆ ಸಾಕ್ಷಿ. ಶೇ 40 ಭ್ರಷ್ಟಾಚಾರಕ್ಕೆ ಮತ್ತೊಂದು ಉದಾಹರಣೆ’ ಎಂದು ಕುಸಿದ ರಸ್ತೆಯ ಚಿತ್ರವನ್ನು ಟ್ಯಾಗ್‌ ಮಾಡಿದ್ದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು. ಈ ಬಗ್ಗೆ ಪ್ರಧಾನಿ ಸಚಿವಾಲಯಕ್ಕೂ ಮಾಹಿತಿ ಹೋಗಿತ್ತು. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಪ್ರಧಾನಿ ಕಚೇರಿ ಗುರುವಾರ ಸಂಜೆ ನಿರ್ದೇಶನ ನೀಡಿದೆ. 

ಸಮಗ್ರ ವರದಿಗೆ ಸೂಚಿಸಿದ ಸಿಎಂ ಬೊಮ್ಮಾಯಿ
ಇನ್ನು ಇದೇ ರಸ್ತೆ ವಿಚಾರವಾಗಿ ಖುದ್ದು ಪ್ರಧಾನಿ ಕಚೇರಿಯಿಂದ ಸಿಎಂ ಬೊಮ್ಮಾಯಿ ಅವರಿಗೆ ಕರೆ ಬಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಭವನದಲ್ಲಿರುವಾಗಲೇ ಅವರಿಗೆ ದೂರವಾಣಿ ಕರೆ ಮಾಡಿದ್ದ ಪ್ರಧಾನಿ ಕಚೇರಿಯ ಅಧಿಕಾರಿಗಳು ಸಮಗ್ರ ವಿವರಣೆ ಕೇಳಿದ್ದಾರೆ ಎನ್ನಲಾಗಿದೆ. ಇದರಿಂದ ಮುಖ್ಯಮಂತ್ರಿ ಅವರು ಮುಜುಗರಕ್ಕೆ ಒಳಗಾಗಿದ್ದು, ಕೂಡಲೇ ಪ್ರಕರಣದ ಕುರಿತು ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಮಾತ್ರವಲ್ಲದೇ ಕಳಪೆ ಕಾಮಗಾರಿ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರದೇಶದಲ್ಲಿ ನೀರಿನ ಪೈಪ್ ಸೋರಿಕೆಯಿಂದ ರಸ್ತೆ ಕುಸಿದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ಜಲಮಂಡಳಿಯವರು ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ನೀರಿನ ಪೈಪ್‌ಲೈನ್‌ ಹಾಕಿದ್ದರು. ಬಿಬಿಎಂಪಿ ಅಧಿಕಾರಿಗಳು ಅದರ ಮೇಲೆ ಡಾಂಬರು ಹಾಕಿದ್ದಾರೆ. ಭಾರ ತಾಳಲಾರದೆ ರಸ್ತೆ ಕುಸಿದಿದೆ. ಈಗ ಎರಡು ಇಲಾಖೆಗಳ ಅಧಿಕಾರಿಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ವರದಿ ಬಂದ ಕೂಡಲೇ, ಕಳಪೆ ಕೆಲಸ ಮಾಡಿದ ಅಧಿಕಾರಿಯನ್ನು ಅಮಾನತು ಮಾಡಲಾಗುವುದು’ ಎಂದು ಕರ್ನಾಟಕ ಸರ್ಕಾರದ ಮೂಲಗಳು ತಿಳಿಸಿವೆ.

SCROLL FOR NEXT