ರಾಜ್ಯ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣ, ಇಡಿಯಿಂದ ಸುಶೀಲ್ ಮಂತ್ರಿ ಬಂಧನ

Nagaraja AB

ಬೆಂಗಳೂರು: ಮಂತ್ರಿ ಡವಲಪರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಸುಶೀಲ್ ಮಂತ್ರಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.

 ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಕ್ಷಿಣ ಭಾರತದ ದೈತ್ಯ  ರಿಯಲ್ ಎಸ್ಟೇಟ್ ಉದ್ಯಮಿ ಸುಶೀಲ್ ಮಂತ್ರಿ ಅವರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ವಿಚಾರಣೆಗಾಗಿ ಆರೋಪಿಯನ್ನು ಇಡಿ ಕಸ್ಟಡಿಗೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಇಡಿ ಪ್ರಕಾರ, ವಿಚಾರಣೆ ನಡೆಯುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ. ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಚಾರಣೆಗಾಗಿ ಸಮನ್ಸ್ ನೀಡಲಾಗಿತ್ತು. ಪಿಎಂಎಲ್ ಎ ಸೆಕ್ಷನ್ 19ರ ಅಡಿಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಇಡಿ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.

2020ರಲ್ಲಿ ಕಂಪನಿ ಮತ್ತು ಅದರ ನಿರ್ದೇಶಕರು, ಅನೇಕ ಇತರ ಉದ್ಯೋಗಿಗಳ ವಿರುದ್ಧ ದಾಖಲಿಸಲಾಗಿದ್ದ ಎಫ್ ಐಆರ್ ಆಧಾರದ ಮೇಲೆ ಇಡಿ ತನಿಖೆಯನ್ನು ಪ್ರಾರಂಭಿಸಿತ್ತು. ಮಾರ್ಚ್ 22 ರಿಂದ ತನಿಖೆ ಆರಂಭಿಸಿದ ಇಡಿ, ಬೆಂಗಳೂರಿನಲ್ಲಿ ಪ್ಲಾಟ್ ನೀಡುವ ಆಮಿಷ ತೋರಿ ಗ್ರಾಹಕರಿಂದ ಹಣ ವಸೂಲಿ ಮಾಡಲಾಗಿತ್ತು. 

ಆ ಹಣವನ್ನು ವೈಯಕ್ತಿಕವಾಗಿ ಬಳಕೆ ಮಾಡಲಾಗಿತ್ತು. ವಿವಿಧ ಹಣಕಾಸು ಸಂಸ್ಥೆಗಳಿಂದ ಸುಶೀಲ್ ಮಂತ್ರಿ ರೂ. 5000 ಕೋಟಿ ಸಾಲ ಪಡೆದಿದ್ದು, 1000 ಕೋಟಿ ರೂ. ಬಾಕಿಯಿದೆ. ಇದರಲ್ಲಿ ಸ್ವಲ್ಪ ಸಾಲವನ್ನು ಎನ್ ಪಿಎ ಎಂದು ಉಲ್ಲೇಖಿಸಲಾಗಿದೆ ಎಂದು ಇಡಿ ಮೂಲಗಳು ಹೇಳಿವೆ.

ಆರೋಪಿ ಹಣ ವರ್ಗಾವಣೆಯಲ್ಲಿ ತೊಡಗಿರುವುದಾಗಿ ಅನೇಕ ಮನೆ ಖರೀದಿದಾರರು ಪೊಲೀಸರು ಮತ್ತು ಇಡಿಗೆ ದೂರು ದಾಖಲಿಸಿದ್ದರು. ಸಾವಿರಾರು ಮನೆ ಖರೀದಿದಾರರಿಂದ ಮುಂಗಡವಾಗಿ ಹಣವಾಗಿ ರೂ. 1000 ಕೋಟಿ ಹಣ ಸಂಗ್ರಹಿಸಲಾಗಿದೆ, ಆದರೆ, ಏಳರಿಂದ 10 ವರ್ಷ ಕಳೆದರೂ ಅವರಿಗೆ ಪ್ಲಾಟ್ ನೀಡಿಲ್ಲ.

SCROLL FOR NEXT