ರಾಜ್ಯ

ಲಾರಿ–ಕಾರು ಮುಖಾಮುಖಿ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

Srinivasamurthy VN

ಮಂಡ್ಯ: ನಾಗಮಂಗಲ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಲಾರಿ–ಕಾರು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಮೂರು ಮಂದಿ ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ಹೊರವಲಯ ಎಂ.ಹೊಸೂರು ಗೇಟ್ ಬಳಿ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮೃತರನ್ನು ನಾಗಮಂಗಲ ತಾಲ್ಲೂಕು ಬೀರೇಶ್ವರಪುರದ ದೇವರಾಜು (42 ವರ್ಷ), ಪಾಂಡವಪುರ ತಾಲ್ಲೂಕಿನ ವದೇಸಮುದ್ರ ಗ್ರಾಮದ ನಿವಾಸಿ, ಕನಗನಮರಡಿ ವೃತ್ತದ ಗ್ರಾಮ ಸಹಾಯಕ ಮಂಜುನಾಥ್ (55 ವರ್ಷ), ಕೆನ್ನಾಳು ಗ್ರಾಮದ ರೈತ ಮಂಜುನಾಥ್ (64 ವರ್ಷ) ಎಂದು ಗುರುತಿಸಲಾಗಿದೆ. ಪಾಂಡವಪುರ ತಾಲ್ಲೂಕಿನ ಎಲೆಕೆರೆ ಗ್ರಾಮದ ನಿವಾಸಿ ದಾಮರಹಳ್ಳಿ ವೃತ್ತದ ಗ್ರಾಮ ಸಹಾಯಕ ಸ್ವಾಮಿ (50) ತೀವ್ರವಾಗಿ ಗಾಯಗೊಂಡಿದ್ದು, ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೇವರಾಜು ಪಾಂಡವಪುರದಲ್ಲಿ ಗ್ರಾಮ ಲೆಕ್ಕಿಗನಾಗಿ‌ ಕಾರ್ಯ ನಿರ್ವಹಿಸುತ್ತಿದ್ದು, ಶನಿವಾರ ಕಚೇರಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸಹಾಯಕರೊಂದಿಗೆ ಸ್ವಗ್ರಾಮದ ಜಮೀನಿನ ಕೆಲಸದ ಉದ್ದೇಶದಿಂದ ಗ್ರಾಮಕ್ಕೆ ಬಂದಿದ್ದರು. ಸಂಜೆ ಕೆಲಸ ಮುಗಿಸಿ ಸ್ಯಾಂಟ್ರೊ ಕಾರಿನಲ್ಲಿ ನಾಗಮಂಗಲ ಕಡೆಯಿಂದ ಪಾಂಡವಪುರದ ಕಡೆ ತೆರಳುತ್ತಿದ್ದಾಗ, ಎಂ.ಹೊಸೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಾವಿ ಕಡೆಗೆ ಸಂಚರಿಸುತ್ತಿದ್ದ ಮದ್ಯ ತುಂಬಿದ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. 

ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ನಾಗಮಂಗಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹಗಳನ್ನು ತಾಲ್ಲೂಕು‌ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕಟುಂಬಸ್ಥರಿಗೆ ಹಸ್ತಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
 

SCROLL FOR NEXT