ರಾಜ್ಯ

ಡಿಸೆಂಬರ್ ನಲ್ಲಿ ಕನ್ನಡ ಸಮಗ್ರ ಮಸೂದೆ ಜಾರಿ: ಸಚಿವ ಸುನಿಲ್ ಕುಮಾರ್

Manjula VN

ಮಂಗಳೂರು: ಕನ್ನಡದ ಪರಿಣಾಮಕಾರಿ ಅನುಷ್ಠಾನಕ್ಕೆ ಕನ್ನಡ ಸಮಗ್ರ ಮಸೂದೆಯನ್ನು ಡಿಸೆಂಬರ್ ನಲ್ಲಿ ಅಂಗೀಕರಿಸಿ ಜಾರಿಗೊಳಿಸಲಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಂಗಳವಾರ ಮಾತನಾಡಿದ ಸಚಿವರು, ಉದ್ಯೋಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಗಬೇಕಿದೆ. ನ್ಯಾಯಾಲಯಗಳಲ್ಲೂ ಕಲಾಪ ಕನ್ನಡದಲ್ಲಿ ನಡೆಯಬೇಕಿದ್ದು, ಜೊತೆಗೆ ಸರ್ಕಾರದ ಸುತ್ತೋಲೆಗಳು ಕನ್ನಡದಲ್ಲಿಯೇ ಇರಬೇಕು ಎಂಬ ಉದ್ದೇಶದಿಂದ ಕನ್ನಡ ಸಮಗ್ರ ಮಸೂದೆಯನ್ನು ರೂಪಿಸಲಾಗಿದೆ. ಈ ಕುರಿತು ಸಾರ್ವಜನಿಕರು ಅಗತ್ಯ ಸಲಹೆಗಳನ್ನು ನೀಡಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ 275 ಕನ್ನಡದ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಈ ಶಾಲೆಗಳಲ್ಲಿ ಕೊಠಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಒಟ್ಟು 39 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಮಕ್ಕಳು ಗಣಿತ ಮತ್ತು ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡಲು  ಜಿಲ್ಲೆಯ 27 ಶಾಲೆಗಳನ್ನು ಅಮೃತ ಶಾಲೆ ಎಂದು ಗುರುತಿಸಿ ಅಧ್ಯಯನಕ್ಕೆ ವಿಶೇಷ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೆ, ಗಡಿ ಗ್ರಾಮಗಳ ಅಭಿವೃದ್ಧಿಗಾಗಿ 21 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಹೊರರಾಜ್ಯಗಳ'ಗಡಿ ಗ್ರಾಮಗಳ ಅಭಿವೃದ್ಧಿಗೆ 21 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ರಾಷ್ಟ್ರ ಕವಿ ಗೋವಿಂದ ಪೈ ಅವರ ಸಂಶೋಧನ ಲೇಖನಗಳ ಮರುಮುದ್ರಣಕ್ಕೆ 30 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ' ಎಂದು ಮಾಹಿತಿ ನೀಡಿದರು. ಇದೇ ವೇಳೆ ಕನ್ನಡಿಗರ ಹಿತ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.

SCROLL FOR NEXT