ರಾಜ್ಯ

ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳ: ಇಂದಿನಿಂದಲೇ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ

Lingaraj Badiger

ಬೆಂಗಳೂರು: ಕನ್ನಡ ರಾಜ್ಯೋತ್ಸವ ದಿನದಿಂದಲೇ ಅನ್ವಯವಾಗುವಂತೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಶೇ. 17 ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 7 ರಷ್ಟು ಮೀಸಲಾತಿ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ.

ಆದರೆ, ಅನುಷ್ಠಾನಕ್ಕೆ ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಸೂಚನೆ ಜಾರಿಗೊಳಿಸುವ ಬಗ್ಗೆ ಗೊಂದಲವಿದ್ದು, ಅದನ್ನು ಮೊದಲು ಸರಿಪಡಿಸಬೇಕಾಗಿದೆ ಎಂದೂ ಅವರು ಹೇಳಿದ್ದಾರೆ.

ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನಗಳನ್ನು ನವೆಂಬರ್ 1 ರಿಂದ ಜಾರಿಗೆ ತರಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಆದರೆ, ವರ್ಧಿತ ಮೀಸಲಾತಿಯನ್ನು ಜಾರಿಗೊಳಿಸಿದ ನಂತರ, ರಾಜ್ಯದಲ್ಲಿ ಒಟ್ಟು ಮೀಸಲಾತಿಯು ಶೇ. 56 ಕ್ಕೆ ಏರುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ರೋಸ್ಟರ್‌ಗಳ ಮೇಲೆ ಮತ್ತೆ ಕೆಲಸ ಮಾಡಬೇಕಾಗಿದೆ ಮತ್ತು ಕಾನೂನು ನಿಬಂಧನೆಗಳ ಅಡಿಯಲ್ಲಿ, ಮೀಸಲಾತಿ ಹೆಚ್ಚಳದ ಅನುಷ್ಠಾನವು ಸುಲಭವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯಲ್ಲಿರುವ ಎಲ್ಲ ಉಪಬಂಧಗಳನ್ನು ಜಾರಿಗೊಳಿಸಲು ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರದ ಎಲ್ಲಾ ವಿಭಾಗಗಳು, ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ನಿಗಮಗಳು, ಮಂಡಳಿಗಳು, ಆಯೋಗಗಳು, ಸರ್ಕಾರಿ ಉದ್ಯಮಗಳ ಮುಖ್ಯಸ್ಥರು, ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯದರ್ಶಿ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಿಇಒಗೆ ಈ ಅಧಿಸೂಚನೆಯ ಪ್ರತಿ ನೀಡಲಾಗಿದೆ.

SCROLL FOR NEXT