ರಾಜ್ಯ

ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಜಿಟಿಜಿಟಿ ಮಳೆ; ನವಂಬರ್ 5ರವರೆಗೆ ಮಳೆ ಮುನ್ಸೂಚನೆ

Sumana Upadhyaya

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ವರುಣನ ಸಿಂಚನವಾಗಿದ್ದು, ಹಿಂಗಾರು ಮಳೆ ಕೊಂಚ ಬಿರುಸಾಗಿದೆ. ಗುರುವಾರ ಬೆಳ್ಳಂಬೆಳಗ್ಗೆ ಶಾಲೆ, ಕಾಲೇಜು, ಕಚೇರಿ, ಕೆಲಸ-ಕಾರ್ಯಗಳಿಗೆ ಹೋಗುವವರಿಗೆ ಕಿರಿಕಿರಿಯಾಗಿದೆ. 

ನಿನ್ನೆ ಬೆಂಗಳೂರಿನ ಜಯನಗರ, ಶಾಂತಿನಗರ, ವಿಜಯನಗರ, ಯಲಹಂಕ, ಹೆಬ್ಬಾಳ, ಚಾಮರಾಜಪೇಟೆ, ವಿಧಾನಸೌಧ ಸೇರಿದಂತೆ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣವಾಗಿ ಹಿಂಗಾರು ಮಳೆಯಾಗಿತ್ತು.

ಹವಾಮಾನ ಇಲಾಖೆ ನವೆಂಬರ್ 5ರವರೆಗೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿದೆ. ಹಲವು ಭಾಗಗಳಲ್ಲಿ ದಟ್ಟ ಮೋಡ ಕವಿದ ವಾತಾವರಣ ಮುಂದುವರೆದಿದೆ.

ರಾಜ್ಯದ ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಭಾಗಗಳಲ್ಲಿ ಮಳೆಯಾಗುತ್ತಿದ್ದು ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ.

ಮೊನ್ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳ ಮೇಲೂ ವರುಣ ಪರಿಣಾಮ ಬೀರಿದ್ದ ಕಾರಣ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವ ರಾಜ್ಯ ಸರ್ಕಾರದ ಕಾರ್ಯಕ್ರಮವು ಕೂಡ ಮಳೆಯ ನಡುವೆಯೇ ನಡೆದಿತ್ತು. 

ಈಶಾನ್ಯ ಮಾನ್ಸೂನ್ ಮಾರುತಗಳಿಂದಾಗಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ತಮಿಳುನಾಡು, ಪುದುಚೇರಿಯ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಈ ವರ್ಷ ಭಾರೀ ಮಳೆಯ ನಿರೀಕ್ಷೆಯಿದೆ. ಚೆನ್ನೈನಲ್ಲಿ ನಿನ್ನೆ ಭಾರೀ ಮಳೆಯ ನಂತರ, ನಗರದ ಕೆಲವು ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

SCROLL FOR NEXT