ರಾಜ್ಯ

ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕುಡಿಯುವ ನೀರು ವ್ಯವಸ್ಥೆ ಜಾರಿಗೆ ಸರ್ಕಾರ ಮುಂದು!

Manjula VN

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳು, ಪಟ್ಟಣ ಪಂಚಾಯಿತಿಗಳು, ಪಟ್ಟಣ ಪುರಸಭೆಗಳು ಮತ್ತು ನಗರ ಪಾಲಿಕೆಗಳು ಸೇರಿದಂತೆ ಎಲ್ಲಾ 224 ಕ್ಷೇತ್ರಗಳಲ್ಲಿರುವ ಮನೆಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಮಾಹಿತಿಗಳು ಹೊರ ಬೀಳಲಿದೆ.

ನವೆಂಬರ್ 11 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆಂದು ಹೇಳಲಾಗುತ್ತಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಆರು ತಿಂಗಳುಗಳು ಬಾಕಿಯಿದ್ದು, ಮನೆಗಳಿಗೆ ಸುರಕ್ಷಿತ ಕುಡಿಯುವ ನೀರಿಗಾಗಿ ಜನರಿಂದ ಭಾರಿ ಬೇಡಿಕೆಯಿರುವುದರಿಂದ ಚುನಾವಣೆ ವೇಳೆ ಇದು ಆಡಳಿತಾರೂಢ ಬಿಜೆಪಿಗೆ ಗೇಮ್ ಚೇಂಜರ್ ಆಗಿ ಕೆಲಸ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರನ್ನು ಸಂಪರ್ಕಿಸಲಾಗಿದ್ದು, ಪುನರುಜ್ಜೀನನ ಮತ್ತು ನಗರ ಪರಿವರ್ತನೆಗಾಗಿ ಅಮೃತ್ 2-ಅಟಲ್ ಮಿಷನ್ ಮೂಲಕ ಹಣವನ್ನು ಒದಗಿಸಲಾಗುತ್ತಿದೆ. ಯೋಜನಾ ವೆಚ್ಚ ಸುಮಾರು 7,300 ಕೋಟಿ ರೂ. ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು , ''ಎಲ್ಲಾ ಮನೆಗಳಿಗೆ, ಅದರಲ್ಲೂ ಸಣ್ಣ ಪ್ರದೇಶಗಳಲ್ಲಿ, ಸುರಕ್ಷಿತ ಕುಡಿಯುವ ನೀರನ್ನು ಪೂರೈಸಲು ಇದೂವರೆಗೆ ಯಾವ ಪ್ರಧಾನಿಯೂ ಮುಂದೆ ಬಂದಿರಲಿಲ್ಲ. ಆದರೆ, ಆ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ. ಈ ಯೋಜನೆಯು ಗುತ್ತಿಗೆದಾರರು ಮತ್ತು ಅಧಿಕಾರಶಾಹಿಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಈ ಮಹತ್ವಾಕಾಂಕ್ಷೆಯ ಯೋಜನೆ ಕಾಗದದಲ್ಲಿ ಮಾತ್ರ ಉಳಿಯಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ರೂ.1 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಎಷ್ಟು ಜನರಿಗೆ ಆ ಪರಿಹಾರ ಸಿಕ್ಕಿದೆ ಎಂಬುದನ್ನು ಪರಿಶೀಲಿಸಿ ಎಂದಿದ್ದಾರೆ.

SCROLL FOR NEXT