ರಾಜ್ಯ

ಕರಡು ಪಟ್ಟಿಯಿಂದ 6.69 ಲಕ್ಷ ಮತದಾರರ ಹೆಸರು ಕೈಬಿಡಲಾಗಿದೆ: ಬಿಬಿಎಂಪಿ

Manjula VN

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2023ರ ಭಾಗವಾಗಿ ಬುಧವಾರ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿ 6.69 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ.

ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣೆ ಆಯೋಗದ ನಿರ್ದೇಶನದಂತೆ ಬಿಬಿಎಂಪಿ ವ್ಯಾಪ್ತಿಯ ಮತದಾರರ ಕರಡು ಪಟ್ಟಿಯನ್ನು ನ.9ರಂದು ಪ್ರಕಟಿಸಲಾಗಿದೆ. ಡಿ.8ರವರೆಗೆ ಆಕ್ಷೇಪಣೆಗೆ ಅವಕಾಶ ಕಲ್ಪಿಸಿದ್ದು, ಜ.5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಕಳೆದ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ಅಂತಿಮ ಮತದಾರರ ಪಟ್ಟಿಯಲ್ಲಿ ಬೆಂಗಳೂರು ನಗರದಲ್ಲಿ ಒಟ್ಟು 94.92 ಲಕ್ಷ ಮತದಾರರಿದ್ದರು. ಪರಿಷ್ಕರಣೆ ವೇಳೆ ಮರಣ ಹೊಂದಿರುವ, ಬೇರೆ ಕ್ಷೇತ್ರದಲ್ಲಿ ಮತ ಹಕ್ಕು ಹೊಂದಿರುವವರೂ ಸೇರಿದಂತೆ ಒಟ್ಟು 6.69,652 ಮತದಾರರನ್ನು ಕರಡು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಹೀಗಾಗಿ, 2022ರ ಜನವರಿಯಲ್ಲಿ ಪ್ರಕಟಿಸಲಾದ ಪಟ್ಟಿಗಿಂತ 3.76 ಲಕ್ಷ ಮತದಾರರು ಇದೀಗ ಕಡಿಮೆಯಾಗಿದ್ದಾರೆಂದು ಹೇಳಿದರು.

ಇನ್ನು ಕರಡು ಮತದಾರರ ಪಟ್ಟಿಗೆ ಹೊಸದಾಗಿ 3,07,535 ಮತದಾರರು ಸೇರ್ಪಡೆಯಾಗಿದ್ದಾರೆ. ಹಾಗೆಯೇ 57,517 ಮತದಾರರ ಹೆಸರು, ವಿಳಾಸ ಬದಲಾವಣೆ ಸೇರಿ ಇನ್ನಿತರೆ ಮಾಹಿತಿಯಲ್ಲಿ ಬದಲಾವಣೆ ಕುರಿತು ಅರ್ಜಿ ಸಲ್ಲಿಸಿದ್ದರು. ಇದೀಗ ಬಿಡುಗಡೆ ಮಾಡಿದ ಕರಡು ಮತದಾರ ಪಟ್ಟಿಯಲ್ಲಿ 47,35,952 ಪುರುಷ ಮತದಾರರು, 43,79,853 ಮಹಿಳಾ ಮತದಾರರು, 925 ಇತರ ಮತದಾರರು ಸೇರಿದಂತೆ ಒಟ್ಟು 91,15,805 ಮತದಾರರಿದ್ದಾರೆ. ಮತದಾರರ ಕರಡು ಪಟ್ಟಿಯಲ್ಲಿ ಲೋಪಗಳಿದ್ದರೆ ಆಕ್ಷೇಪಣೆ ಸಲ್ಲಿಸಲು 1 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಪಟ್ಟಿಯನ್ನು ವಿಹೆಚ್ಎ ಮೊಬೈಲ್ ಆ್ಯಪ್ ಮತ್ತು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ವೆಬ್ ಸೈಟ್ ನಲ್ಲಿ ವೀಕ್ಷಿಸಿ ಮತದಾರರು ಮಾಹಿತಿಯನ್ನು ಪರೀಕ್ಷಿಸಿಕೊಳ್ಳಬಹುದು. ಅದರಲ್ಲಿ ತಪ್ಪುಗಳಿದ್ದರೆ ಚುನಾವಣಾಧಿಕಾರಿಗಳ ಕಚೇರಿ, ಮತದಾರರ ನೋಂದಾವಣಾಧಿಕಾರಿಗಳ ಕಚೇರಿ, ಸಹಾಯ ನೋಂದಾವಣಾಧಿಕಾರಿಗಳ ಕಚೇರಿ, ವಾರ್ಡ್ ಕಚೇರಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಬಳಿ ನಮೂನೆ 6,7 ಮತ್ತು 8ರಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. 2023ರ ಜನವರಿ 1 ರಂದು ಅಂತಿ ಮತದಾರರ ಪಟ್ಟಿಯನ್ನು ಪ್ರಟಿಸಲಾಗುವುದು ಎಂದರು.

17 ವರ್ಷ ತುಂಬಿದವರೂ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಬಹುದು. 18 ವರ್ಷ ತುಂಬಿದ ಕೂಡಲೇ ಅವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು ಎಂದು ಇದೇ ವೇಳೆ ಮಾಹಿತಿ ನೀಡಿದರು.

SCROLL FOR NEXT