ರಾಜ್ಯ

ಚಿಕ್ಕಬಳ್ಳಾಪುರ: ಎಎಸ್ಐ ಮನೆ ಮೇಲೆ ಸಿನಿಮೀಯ ರೀತಿಯಲ್ಲಿ ದುಷ್ಕರ್ಮಿಗಳ ದಾಳಿ, ಪುತ್ರನ ಸ್ಥಿತಿ ಗಂಭೀರ

Manjula VN

ಚಿಕ್ಕಬಳ್ಳಾಪುರ: ಎಎಸ್ಐ ಮನೆ ಮೇಲೆಯೇ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಮನೆ ಮಂದಿ ಮೇಲೆ ಗುಂಡಿ ಹಾರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಪೆರೇಸಂದ್ರದ ಗ್ರಾಮದ ಗುಡಿಬಂಡೆ ರಸ್ತೆಯಲ್ಲಿನ ಮಂಜುನಾಥ ಕಲ್ಯಾಣ ಮಂಟಪದ ಬಳಿ ವಾಸವಿದ್ದ ಎಎಸ್ಐ ನಾರಾಯಣ ಸ್ವಾಮಿ ಎಂಬುವವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು, ದರೋಡೆಗೆ ಯತ್ನಿಸಿದ್ದಾರೆ.

ಈ ವೇಳೆ ಕುಟುಂಬಸ್ಥರು ಅಡ್ಡಿಪಡಿಸಿದಾಗ ಬಂದೂಕಿನಿಂದ ಗುಂಡು ಹಾರಿಸಿ ಬೆದರಿಸಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.

ನಾರಾಯಣಸ್ವಾಮಿ ಮನೆಯ ದರೋಡೆ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಈ ವೇಳೆ ಎಎಸ್ಐ ನಾರಾಯಣಸ್ವಾಮಿಯವರ ಪುತ್ರ ಶರತ್ ಎಂಬುವರ ಸೊಂಟಕ್ಕೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಇದೀಗ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಶರತ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಇನ್ನು ಘಟನೆ ವೇಳೆ ನಾರಾಯಣಸ್ವಾಮಿಯವರ ಮೇಲೆಯೂ ದರೋಡೆಕೋರರು ಹಲ್ಲೆ ನಡೆಸಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನೂ ಕೂಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಘಟನೆ ಬಳಿಕ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ತಪಾಸಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

SCROLL FOR NEXT