ರಾಜ್ಯ

ಬೆಂಗಳೂರು: ಬೈಕಿನಿಂದ ಸ್ಕಿಡ್ ಆಗಿ ಬಿದ್ದ ಸವಾರ, ರಸ್ತೆಗುಂಡಿಯಲ್ಲಿ ಕುಳಿತು ಪ್ರತಿಭಟನೆ

Sumana Upadhyaya

ಬೆಂಗಳೂರು: ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬ್ಯುಸಿಯಲ್ಲಿ ಮಹಾನಗರ ಪಾಲಿಕೆ ಕಾರ್ಯನಿರತವಾಗಿದ್ದರೆ ಹಲಸೂರಿನ ಆದರ್ಶ ಥಿಯೇಟರ್ ಬಳಿ ರಸ್ತೆಯ ಹೊಂಡಗುಂಡಿಯಿಂದ ಬೈಕ್ ಸವಾರ ಜಾರಿ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಇದರಿಂದ ಕೋಪಗೊಂಡ ಬೈಕ್ ಸವಾರ ರಸ್ತೆ ಗುಂಡಿಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ದಾರಿಹೋಕರು ಸೆರೆಹಿಡಿದ ಘಟನೆಯ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಸ್ಥಳೀಯ ಶಾಸಕ ಎಸ್ ರಘು ಅವರ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ, ಶಾಂತಿನಗರ ಮತ್ತು ಶಿವಾಜಿನಗರದ ಗಡಿಭಾಗದಲ್ಲಿ ಇದೆ. ಗಣ್ಯ ವ್ಯಕ್ತಿಗಳ ಭೇಟಿ, ಹೊಂಡಗುಂಡಿಗಳಿಗೆ ಯಾರಾದರೂ ಬಿದ್ದಾಗ ಮಾತ್ರ ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತದೆ ಎನ್ನುತ್ತಾರೆ.

ಘಟನೆಯ ವಿಡಿಯೋ ವೈರಲ್ ಆದ ಬಳಿಕ ಪಾಲಿಕೆ ಅಧಿಕಾರಿಗಳು ಗುಂಡಿ ಸರಿಪಡಿಸುವ ಕಾರ್ಯ ಆರಂಭಿಸಿದ್ದಾರೆ. ಒಂದು ತಿಂಗಳ ಹಿಂದೆಯೇ ಕಾಮಗಾರಿ ಕೈಗೆತ್ತಿಕೊಂಡಿದ್ದೆವು, ಆದರೆ ಮಳೆಯಿಂದಾಗಿ ಟಾರಿಂಗ್ ವಿಳಂಬವಾಗಿದೆ ಎಂದು ಬಿಬಿಎಂಪಿಯ ಪ್ರಮುಖ ರಸ್ತೆಗಳ ಸಹಾಯಕ ಎಂಜಿನಿಯರ್ ಸಿದ್ದೇಶ್ ಹೇಳಿದ್ದಾರೆ. 

ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸರಕಾರದ ಬಳಿ ಅಭಿವೃದ್ಧಿಗೆ ಯಾವುದೇ ಯೋಜನೆ ಇಲ್ಲ. ತಮ್ಮ ಮೊದಲ ಅವಧಿಯಲ್ಲಿ ಬೆಂಗಳೂರನ್ನು ಕಸದ ನಗರವನ್ನಾಗಿ ಬಿಜೆಪಿ ಮಾಡಿತು. ಎರಡನೇ ಹಂತದಲ್ಲಿ ಐಟಿ ರಾಜಧಾನಿಯನ್ನು ಗುಂಡಿಗಳ ಜಂಕ್ಷನ್ ಆಗಿ ಪರಿವರ್ತಿಸಿದ್ದಾರೆ ಎಂದು ಬೆಂಗಳೂರು ಮಾಜಿ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಟೀಕಿಸಿದ್ದಾರೆ.

SCROLL FOR NEXT