ರಾಜ್ಯ

ಮಂಗಳೂರು ಆಟೋ ಸ್ಫೋಟ ಶಂಕಿತನಿಗೆ ಜಾಗತಿಕ ಜಾಲದ ಉಗ್ರ ಸಂಘಟನೆಯ ಸ್ಪೂರ್ತಿ! 

Srinivas Rao BV

ಮಂಗಳೂರು: ಮಂಗಳೂರಿನಲ್ಲಿ ಸಂಭವಿಸಿದ್ದ ಆಟೋ ಸ್ಫೋಟ ಪ್ರಕರಣದ ಶಂಕಿತ ಶಾರೀಕ್ ಗೆ ಜಾಗತಿಕ ಜಾಲದ ಉಗ್ರ ಸಂಘಟನೆಯೇ ಸ್ಪೂರ್ತಿ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
 
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಅಸ್ತಿತ್ವ ಹೊಂದಿರುವ ಒಂದು ಉಗ್ರ ಸಂಘಟನೆಯ ಪ್ರಭಾವ ಹಾಗೂ ಸ್ಪೂರ್ತಿ ಶಾರೀಕ್ ಗೆ ಇತ್ತು ಎಂದು ಹೇಳಿದ್ದು, ಆತನನ್ನು ಆತನ ಮಲತಾಯಿ ಹಾಗೂ ಸಹೋದರಿ ಗುರುತು ಹಿಡಿದಿದ್ದಾರೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದರು.
 
ಇದಕ್ಕೂ ಮುನ್ನ ಭಯೋತ್ಪಾದಕ ಬರಹಗಳನ್ನು ಗೋಡೆ ಮೇಲೆ ಗೀಚಿದ್ದ ಪ್ರಕರಣದಲ್ಲಿ 2020 ರಲ್ಲಿ ಶಾರೀಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಗಸ್ಟ್ ನಲ್ಲಿ ಶಿವಮೊಗ್ಗದಲ್ಲಿ ಉಂಟಾಗಿದ್ದ ಕೋಮು ಉದ್ವಿಗ್ನತೆ ಪ್ರಕರಣದಲ್ಲಿ ಶಾರೀಕ್ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದಾನೆ.  ಆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಾದ ಮಾಜ್ ಹಾಗೂ ಸಯೀದ್ ಯಾಸೀನ್ ನ್ನು ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು. ಶಾರೀಕ್ ಸೆಪ್ಟೆಂಬರ್ ನಲ್ಲಿ ನಡೆದ ದಾಳಿಯ ವೇಳೆ ಪರಾರಿಯಾಗಿದ್ದ. 

ನಾಗುರಿಯಲ್ಲಿ ನ.19 ರಂದು ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ಶಾರೀಕ್ ಗೆ ಬಾಂಬ್ ತಯಾರಿಸಲು ತರಬೇತಿ ನೀಡಲಾಗಿತ್ತೇ? ಅಥವಾ ಅದನ್ನು ಆತ ಸ್ವಯಂ ಕಲಿತುಕೊಂಡನೇ? ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. 

ಶಂಕಿತ ವಾಸವಿದ್ದ ಮನೆಯಲ್ಲಿ ಹಲವು ಸ್ಫೋಟಕ ವಸ್ತುಗಳು ಸಿಕ್ಕಿವೆ. ಈ ಆರೋಪಿಯು ಮೈಸೂರಿನಿಂದ ಮಂಗಳೂರಿಗೆ ಬಂದಿದ್ದಾನೆ. ಮತ್ತೊಂದು ನಕಲಿ ಗುರುತಿನ ಚೀಟಿ ಪಡೆದು ಕೊಯಮತ್ತೂರಲ್ಲೂ ವಾಸವಿದ್ದ ಎಂದು ಅಲೋಕ್ ಕುಮಾರ್ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ.
 
ಚಾಲಕ ಪುರುಷೋತ್ತಮ್ ಗೆ ಸುಟ್ಟ ಗಾಯಗಳಾಗಿದ್ದು, ಶಾರೀಕ್ ಗೆ ಶೇ.40 ರಷ್ಟು ಸುಟ್ಟ ಗಾಯಗಳಾಗಿದ್ದು, ಆತ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

SCROLL FOR NEXT