ರಾಜ್ಯ

ಮಂಗಳೂರು ಆಟೋ ಸ್ಫೋಟ ಪ್ರಕರಣ ಶೀಘ್ರದಲ್ಲೇ ಎನ್‌ಐಎಗೆ ಹಸ್ತಾಂತರ: ಡಿಜಿಪಿ ಪ್ರವೀಣ್ ಸೂದ್

Lingaraj Badiger

ಮಂಗಳೂರು: ಮಂಗಳೂರಿನ ಗರೋಡಿಯಲ್ಲಿ ಸಂಭವಿಸಿದ ಆಟೋರಿಕ್ಷಾ ಸ್ಫೋಟ ಪ್ರಕರಣವನ್ನು ಶೀಘ್ರದಲ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಅಧಿಕೃತಕವಾಗಿ ಹಸ್ತಾಂತರಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶ(ಡಿಜಿಪಿ) ಪ್ರವೀಣ್ ಸೂದ್ ಅವರು ಬುಧವಾರ ಹೇಳಿದ್ದಾರೆ.

ಇಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಡಿಜಿಪಿ ಪ್ರವೀಣ್ ಸೂದ್ ಅವರು ನಗರದ ಹೊರವಲಯದಲ್ಲಿ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೂ ಭೇಟಿ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್ ತಮಿಳುನಾಡಿನ ಕೊಯಮತ್ತೂರು ಮತ್ತು ಕನ್ಯಾಕುಮಾರಿಯಂತಹ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯ ಭಾಗವಾಗಿ ವಿವಿಧ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಮತ್ತು ವಿವಿಧ ಸ್ಥಳಗಳಿಗೆ ತಂಡಗಳನ್ನು ಕಳುಹಿಸಲಾಗಿದೆ ಎಂದರು.

ಈ ವೇಳೆ ಮಾತನಾಡಿದ ಪ್ರವೀಣ್ ಸೂದ್ ಅವರು, ಸ್ಫೋಟ ನಡೆದ ಮೊದಲ ದಿನದಿಂದಲೇ ಎನ್‌ಐಎ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆಯ ಭಾಗವಾಗಿದ್ದು, ಶೀಘ್ರದಲ್ಲೇ ಪ್ರಕರಣವನ್ನು ಅಧಿಕೃತವಾಗಿ ಎನ್‌ಐಎಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.

SCROLL FOR NEXT