ರಾಜ್ಯ

ಒಂದೇ ದಿನದೊಳಗೆ ಮಹಿಳಾ ಆಯೋಗದ ದೂರುಗಳ ತನಿಖೆಗೆ ಸಿಎಂ ಬೊಮ್ಮಾಯಿ ಸೂಚನೆ

Nagaraja AB

ಬೆಂಗಳೂರು: ಮಹಿಳಾ ಆಯೋಗದಿಂದ ಸ್ವೀಕಾರವಾದ ದೂರುಗಳನ್ನು 7 ರಿಂದ 8 ಗಂಟೆಯೊಳಗೆ ತನಿಖೆ ಪ್ರಾರಂಭಿಸಬೇಕೆಂದು ಆಯೋಗದ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಮಹಿಳಾ ಆಯೋಗಕ್ಕೆ ಸಮರ್ಥ ವಕೀಲರನ್ನು ನೇಮಕ ಮಾಡಲಾಗುವುದು, ಆಯೋಗ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು.

ಮಹಿಳೆಯರ ಕಲ್ಯಾಣ ಮತ್ತು ಸುರಕ್ಷತೆಗಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆಶಾ ಕಾರ್ಯಕರ್ತೆಯರು, ಅಡುಗೆ ಮಾಡುವವರ ಗೌರವ ಧನ ಹೆಚ್ಚಿಸಲಾಗಿದೆ. ಈ ವರ್ಷ 4,000 ಹೊಸ ಅಂಗನವಾಡಿಗಳು ನಿರ್ಮಾಣವಾಗುತ್ತಿದ್ದು, ಮಹಿಳೆಯರಿಗೆ ಎಲ್ಲಾ ಹಂತದ ನೆರವು ನೀಡಲಾಗುತ್ತಿದೆ. ಮಹಿಳೆಯರು ಸಬಲರಾದರೆ ದೇಶ ಸಬಲವಾಗುತ್ತದೆ ಎಂದು ಅವರು ತಿಳಿಸಿದರು.

ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ 7,500 ಕೃತಕ ಬುದ್ದಿಮತ್ತೆಯ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಮಹಿಳಾ ಪೊಲೀಸ್ ಒಳಗೊಂಡ ಪಿಂಕ್ ಹೊಯ್ಸಳ ವಾಹನಗಳು ಮಹಿಳೆಯರನ್ನು  ರಕ್ಷಿಸಲು ಸಂಚರಿಸುತ್ತವೆ. ಶಾಲಾ- ಕಾಲೇಜುಗಳ ಹಾಸ್ಟೆಲ್ ಗಳಲ್ಲಿ ಅಲ್ಪಾವಧಿ ಸ್ವಯಂ ರಕ್ಷಣಾ ತರಬೇತಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

SCROLL FOR NEXT