ರಾಜ್ಯ

ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಸ್ವೀಕಾರ: ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ, ಹಲವು ದಾಖಲೆ, 10 ಲಕ್ಷ ನಗದು ವಶ

Shilpa D

ಬೆಳಗಾವಿ: ಲಂಚ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲೇ ಸಿಕ್ಕಿಬಿದ್ದ ಚನ್ನಮ್ಮನ ಕಿತ್ತೂರು ತಹಶೀಲ್ದಾರ್ ಮನೆ ಹಾಗೂ ಕಚೇರಿಯನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ತಡರಾತ್ರಿಯೂ ಜಾಲಾಡಿದರು. ಹಲವು ದಾಖಲೆಗಳು ಹಾಗೂ 10 ಲಕ್ಷ ಕ್ಕೂ ಅಧಿಕ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಹಲಗಿ ಹಾಗೂ ಕೇಸ್ ವರ್ಕರ್ ಪ್ರಸನ್ನ ಜಿ ಲೋಕಾಯುಕ್ತ ಬಲೆಗೆ ಬಿದ್ದವರು. ಕಿತ್ತೂರು ತಾಲೂಕಿನ ಖೊದಾನಪೂರ ಗ್ರಾಮದ ಬಾಪುಸಾಹೇಬ ಇನಾಮದಾರ ಎಂಬುವವರು ತಮ್ಮ 10 ಎಕರೆ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕಿತ್ತೂರು ತಹಶೀಲ್ದಾರ್ 5 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಬಾಪುಸಾಹೇಬ್ ಪುತ್ರ ರಾಜೇಂದ್ರ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದರು. ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಕಿತ್ತೂರು ತಹಶೀಲ್ದಾರ್ ಮನೆಯಲ್ಲಿಯೇ ಜಮೀನಿನ ಖಾತೆ ಬದಲಾವಣೆ ಮಾಡಲು 2 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ  ದಾಳಿ ಮಾಡಿದ್ದಾರೆ.

ಎರಡು ಲಕ್ಷ ಹಣ ಮತ್ತು ಶ್ಯೂರಿಟಿಗಾಗಿ 20 ಲಕ್ಷ ಮೌಲ್ಯದ ಖಾಲಿ ಚೆಕ್ ಅನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಬೆಳಗಾವಿ ಎಸ್‍ಪಿ ಯಶೋಧಾ ವಂಟಗೂಡಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾಗಿ ಅಪೂರ್ಣ ಹುಲಗೂರ ತಂಡದ ಸಿಬ್ಬಂದಿ ಭಾಗಿಯಾಗಿದ್ದಾರೆ.

ಶುಕ್ರವಾರ 2 ಲಕ್ಷ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದ ತಹಶೀಲ್ದಾರ್‌ ಸೋಮಲಿಂಗಪ್ಪ ಹಲಗಿ ಹಾಗೂ  ಗುಮಾಸ್ತ ಜಿ.ಪ್ರಸನ್ನ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ಶನಿವಾರ ಬೆಳಿಗ್ಗೆ ಇಬ್ಬರನ್ನೂ ಬೆಳಗಾವಿಗೆ ಕರೆತಂದು, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದರು. ಬಳಿಕ ಲೋಕಾಯುಕ್ತ  ನ್ಯಾಯಾಧೀಶರ ಮನೆಗೆ ಆರೋಪಿತರನ್ನು ಕರೆದೊಯ್ದರು. ಅಲ್ಲಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕರೆತಂದಿದ್ದಾರೆ.

SCROLL FOR NEXT