ರಾಜ್ಯ

ಬೆಂಗಳೂರು: ಹಲ್ಲೆ ನಡೆಸಲು ಮುಂದಾದ ಕೊಲೆ ಆರೋಪಿಗೆ ಪೊಲೀಸರ ಗುಂಡೇಟು, ಬಂಧನ

Manjula VN

ಬೆಂಗಳೂರು: ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬನಿಗೆ ಮಾದನಾಯಕನಹಳ್ಳಿ ಪೊಲೀಸರು ಗುಂಡು ಹೊಡೆದು ಬಂಧನಕ್ಕೊಳಪಡಿಸಿದ್ದಾರೆ.

ಪೊಲೀಸರ ಗುಂಡೇಟು ತಗುಲಿ ಕಾಲಿಗೆ ಗಾಯಗೊಂಡಿರುವ ರೌಡಿ ರಾಜ ರಾಜನ್ ಅಲಿಯಾಸ್ ಸೇಟು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ನವೆಂಬರ್ 14 ರಂದು ಆರೋಪಿ ಹೀಗೂ ಆತನ ಸಹಚರರು ದಾಸನಪುರದ ಮಾಚೋಹಳ್ಳಿ ಬಳಿ ನಟರಾಜ್ ಅಲಿಯಾಸ್ ಮುಳ್ಳು ಎಂಬ ಮತ್ತೊಬ್ಬ ರೌಡಿ ಶೀಟರ್ ಅನ್ನು ಕೊಲೆ ಮಾಡಿದ್ದರು.

ನಂತರ ಗ್ಯಾಂಗ್ ಪುಣೆಗೆ ಪರಾರಿಯಾಗಿತ್ತು. ಪೊಲೀಸರ ತಂಡವೊಂದು ಆರೋಪಿಯನ್ನು ಹುಡುಕಿಕೊಂಡು ನೆರೆ ರಾಜ್ಯಕ್ಕೆ ತೆರಳಿ ಬರಿಗೈಯಲ್ಲಿ ವಾಪಸಾಗಿದ್ದರಿಂದ ಗ್ಯಾಂಗ್ ಅಲ್ಲಿಂದ ಪರಾರಿಯಾಗಿತ್ತು.

ಬುಧವಾರ ನಗರದಲ್ಲಿ ರಾಜನ್ ಮತ್ತು ಆತನ ಸಹಚರ ಕುಮಾರ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

“ಶುಕ್ರವಾರ ಮುಂಜಾನೆ, ಪೊಲೀಸ್ ತಂಡವು ಕೊಲೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ರಾಜನ್‌ನನ್ನು ಕರೆದೊಯ್ದಿತ್ತು. ಆರೋಪಿಯು ನೈಸ್ ಜಂಕ್ಷನ್ ಬಳಿಯ ನವಿಲ್ ಲೇಔಟ್ ಬಳಿ ವಶಕ್ಕೆ ಪಡೆದಿದ್ದ ಅದೇ ಲಾಂಗ್ ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಒಬ್ಬ ಪೊಲೀಸ್ ಪೇದೆ ಎಚ್ ನಾಮದಾರ್ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಳೆ ವೈಷಮ್ಯವೇ ನಟರಾಜ್ ಹತ್ಯೆಗೆ ಕಾರಣ’’ ಎಂದು ಪೊಲೀಸರು ತಿಳಿಸಿದ್ದು, ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT