ರಾಜ್ಯ

ವ್ಯಕ್ತಿಯೊಬ್ಬನನ್ನು ಕೊಂದು, ದೇಹವನ್ನು ಕತ್ತರಿಸಿದ ಪ್ರಕರಣದಲ್ಲಿ 8 ವರ್ಷಗಳ ನಂತರ ದಂಪತಿ ಖುಲಾಸೆ

Ramyashree GN

ಬೆಂಗಳೂರು: 2014ರಲ್ಲಿ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸಂಚಲನ ಮೂಡಿಸಿದ್ದ ಪ್ರಕರಣದಲ್ಲಿ ಲಾರಿ ಚಾಲಕನನ್ನು ಕೊಲೆ ಮಾಡಿ ದೇಹವನ್ನು ಕತ್ತರಿಸಿದ್ದ ದಂಪತಿ ವಿರುದ್ಧ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.

35 ವರ್ಷದ ಲಾರಿ ಚಾಲಕ ಸಮೀವುಲ್ಲಾ ಎಂಬಾತನನ್ನು ಕೊಲೆಗೈದು ಆತನ ದೇಹವನ್ನು ಕತ್ತರಿಸಿದ್ದ ಆರೋಪದ ಮೇಲೆ ಮುಕ್ತಿಯಾರ್ ಅಹ್ಮದ್ (45) ಮತ್ತು ಅವರ ಪತ್ನಿ ರೇಷ್ಮಾ (30) ಎಂಬುವವರನ್ನು ಬಂಧಿಸಲಾಗಿತ್ತು. 2014ರ ಅಕ್ಟೋಬರ್ 3 ರಂದು ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಅಪರಿಚಿತ ವ್ಯಕ್ತಿಯ ಮುಂಡ ಮತ್ತು ತೋಳುಗಳ ಭಾಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಮೂರು ದಿನಗಳ ನಂತರ, ಪೊಲೀಸರಿಗೆ ಆ ವ್ಯಕ್ತಿ ಸಮೀವುಲ್ಲಾ ಎಂದು ತಿಳಿದುಬಂದಿತ್ತು.

'ದಂಪತಿ ವಿರುದ್ಧ ತನಿಖಾಧಿಕಾರಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿರುವುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಪ್ರಾಸಿಕ್ಯೂಷನ್ ಪ್ರಕರಣವು ಅನುಮಾನಗಳಿಂದ ಕೂಡಿದ್ದು, ಸಾಕ್ಷಿಗಳ ಸಾಕ್ಷ್ಯವು ಸ್ಥಿರವಾಗಿಲ್ಲ ಅಥವಾ ದೃಢೀಕರಿಸುವುದಿಲ್ಲ ಎಂದಿರುವ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು (CCH-64) ಶುಕ್ರವಾರ ದಂಪತಿಯನ್ನು ಖುಲಾಸೆಗೊಳಿಸಿದ್ದಾರೆ' ಎಂದು ದಂಪತಿ ಪರ ವಕೀಲರಾದ ಎಂಆರ್ ಹರೀಶ್ ಕುಮಾರ್ ಟಿಎನ್ಎಸ್ಇಗೆ ತಿಳಿಸಿದರು.

ಮಡಿವಾಳ ಪೊಲೀಸರು ದಂಪತಿಯನ್ನು ಮಂಗಮ್ಮನಪಾಳ್ಯದ ಮದೀನಾನಗರದಲ್ಲಿರುವ ಅವರ ಮನೆಯಲ್ಲಿ ಬಂಧಿಸಿದ್ದರು. ಈ ದಂಪತಿ ತಮ್ಮ ಮನೆಯಲ್ಲಿ ಸಮೀವುಲ್ಲಾನನ್ನು ಕೊಂದಿದ್ದಾರೆ ಎಂದಿದ್ದ ಪೊಲೀಸರು, ರೇಷ್ಮಾ ಅವರನ್ನು ನಂಬರ್ 1 ಮತ್ತು ಅವರ ಪತಿಯನ್ನು ನಂಬರ್ 2 ಆರೋಪಿಯನ್ನಾಗಿ ಮಾಡಿದ್ದರು.

ಸಮೀವುಲ್ಲಾ ಅವರು ರೇಷ್ಮಾ ಅವರ ಸಂಬಂಧಿಯಾಗಿದ್ದು, ಅವರು ಅನೈತಿಕ ಸಂಬಂಧ ಹೊಂದಿದ್ದರಿಂದ ಆಕೆಯ ಮನೆಗೆ ಭೇಟಿ ನೀಡುತ್ತಿದ್ದರು. 2014ರ ಅಕ್ಟೋಬರ್ 2ರಂದು ಸಮೀವುಲ್ಲಾ ತಮ್ಮ ಮನೆಗೆ ಹೋಗುವುದನ್ನು ಅಹ್ಮದ್ ನೋಡಿದ್ದರು. ಇದು ಅವರ ನಡುವೆ ಜಗಳಕ್ಕೆ ಕಾರಣವಾಗಿತ್ತು. ನಂತರ ರೇಷ್ಮಾ ಮತ್ತು ಅಹ್ಮದ್ ಸೇರಿ ಸಮೀವುಲ್ಲಾನನ್ನು ತಂತಿಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಸಾಕ್ಷ್ಯವನ್ನು ನಾಶಪಡಿಸಲು, ದಂಪತಿ ಶವವನ್ನು ಸ್ನಾನಗೃಹಕ್ಕೆ ಕೊಂಡೊಯ್ದು, ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಡುಗಳನ್ನು ಪ್ಯಾಕ್ ಮಾಡಿದ್ದಾರೆ ಎಂದು ಪೊಲೀಸರು ತಮ್ಮ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

ಮುಂಡವನ್ನು ಬಸ್ ನಿಲ್ದಾಣದಲ್ಲಿ ಎಸೆದು ನಂತರ ಕಲಾಸಿಪಾಳ್ಯ ಮುಖ್ಯರಸ್ತೆ ಬಳಿಯ ಕಸದ ತೊಟ್ಟಿಯಲ್ಲಿ ತಲೆಯನ್ನು ಹಾಕಿದ್ದಾರೆ. ಎಚ್‌ಎಸ್‌ಆರ್ ಲೇಔಟ್‌ನ 9ನೇ ಮುಖ್ಯರಸ್ತೆಯಲ್ಲಿ ಚಾಪರ್ ಮತ್ತು ಆಕ್ಸಲ್ ಬ್ಲೇಡ್‌ನ್ನು ಚರಂಡಿಗೆ ಎಸೆಯಲಾಗಿದೆ ಎಂದು ಮಡಿವಾಳ ಪೊಲೀಸರು ತಿಳಿಸಿದ್ದಾರೆ. ಅಹ್ಮದ್ ಕಳೆದ ಎಂಟು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದರೆ, ರೇಷ್ಮಾ ಜಾಮೀನಿನ ಮೇಲೆ ಹೊರಗಿದ್ದರು.

SCROLL FOR NEXT