ರಾಜ್ಯ

ಚಿಂತಾಮಣಿ: ಕಂಬಕ್ಕೆ ಕಟ್ಟಿ ಹಾಕಿ ದಲಿತ ಬಾಲಕನಿಗೆ ಥಳಿತ

Nagaraja AB

ಚಿಂತಾಮಣಿ: ಸರ್ವಣೀಯರ ಗುಂಪೊಂದು 14 ವರ್ಷದ ದಲಿತ ಸಮುದಾಯದ ಬಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಬಾಲಕನನ್ನು ರಕ್ಷಿಸಲು ಹೋದ ಪೋಷಕರ ಮೇಲೂ ಹಲ್ಲೆ ನಡೆಸಲಾಗಿದೆ.

ಚಿಂತಾಮಣಿ ತಾಲೂಕಿನಿಂದ 10 ಕಿಲೋ ಮೀಟರ್ ದೂರದಲ್ಲಿರುವ ಕೆಂಪದೇನಹಳ್ಳಿಯಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಎಲ್ ನಾಗೇಶ್ ತಿಳಿಸಿದ್ದಾರೆ.  ಶನಿವಾರ ಎಸ್ ಪಿ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎನ್ ಎಂ ನಾಗರಾಜ್, ಇದೊಂದು ದುರಾದೃಷ್ಟಕರ ಘಟನೆ ಎಂದಿದ್ದಾರೆ.  ಬಾಲಕ ಹಾಗೂ ಆತನ ಪೋಷಕರಿಗೆ ತಲಾ 25,000 ರೂಪಾಯಿ ಪರಿಹಾರವನ್ನು ಅವರು ಪ್ರಕಟಿಸಿದ್ದಾರೆ. ಬಾಲಕನ ತಾಯಿ ರತ್ನ ನೀಡಿದ ದೂರಿನ ಆಧಾರದ ಮೇಲೆ ಮಹಿಳೆ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಈ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕಾಗಿ ತಂಡವೊಂದನ್ನು ರಚಿಸಲಾಗಿದೆ. 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಸರ್ವಣೀಯ ಸಮುದಾಯಕ್ಕೆ ಸೇರಿದ 4 ವರ್ಷದ ಬಾಲಕಿಯೊಬ್ಬಳನ್ನು ಯಾರೂ ಇಲ್ಲದ ಸ್ಥಳಕ್ಕೆ ಕರೆದೊಯ್ದು ಆಕೆಯ ಚಿನ್ನದ ಓಲೆಯನ್ನು ಕಳಚಿದ್ದಾನೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಬಾಲಕ ಹಾಗೂ ಆತನ ಪೋಷಕರಿಗೆ ಥಳಿಸಿದ್ದಾರೆ.

ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.  ನಾಲ್ಕು ವರ್ಷದ ಬಾಲಕಿಯ ತಾಯಿ ಅಂಬಿಕಾ ಬಾಲಕ ಮತ್ತು ಆತನ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ. 
 

SCROLL FOR NEXT