ರಾಜ್ಯ

ಬೆಂಗಳೂರು ನಗರದಲ್ಲಿ 20 ವರ್ಷಗಳ ಬಳಿಕ  ಪ್ರೇಕ್ಷಕರ ಮನಸೂರೆಗೊಳ್ಳಲಿದೆ ರಾಂಬೋ ಸರ್ಕಸ್!

Sumana Upadhyaya

ಸರ್ಕಸ್ ಅತ್ಯಪೂರ್ವ ಕಲೆ, ಸರ್ಕಸ್ ಮಾಡುವ ಕಲಾವಿದರು ಭಾರೀ ಕಸರತ್ತು ಮಾಡಬೇಕು, ಅಪಾರ ಧೈರ್ಯ ಬೇಕು. ಪ್ರದರ್ಶನ ಕಲಾವಿದರಿಗೆ ಕಳೆದೆರಡು ವರ್ಷ ಕೋವಿಡ್ ಕಾರಣದಿಂದ ಪ್ರದರ್ಶನಗಳನ್ನು ನೀಡಲು ಸಾಧ್ಯವಾಗದೆ ಸಾಕಷ್ಟು ಸಂಕಷ್ಟವಾಗಿತ್ತು. ಕೋವಿಡ್ ಲಾಕ್ ಡೌನ್ ಹಾಗು ಬಿಗಿ ನಿಯಮಗಳ ಕಾರಣದಿಂದಾಗಿ ಪ್ರದರ್ಶನಗಳು ನಡೆಯದೆ ಸಾವಿರಾರು ಕಲಾವಿದರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಕೋವಿಡ್ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಸಾಧ್ಯವಾಗದೆ ಅನೇಕ ಕಂಪನಿಗಳು ಮುಚ್ಚಲ್ಪಟ್ಟಿವೆ. ಸರ್ಕಸ್ ಕಲಾವಿದರು ಮತ್ತು ಕಂಪನಿಗಳು ಇದಕ್ಕೆ ಹೊರತಾಗಿಲ್ಲ.

ಆದರೆ ಈ ವರ್ಷ ಭಾರತದ ವಿಶ್ವವಿಖ್ಯಾತ ರಾಂಬೋ ಸರ್ಕಸ್ ಈ ಬಿಕ್ಕಟ್ಟಿನ ಸವಾಲನ್ನು ಯಶಸ್ವಿಯಾಗಿ ಎದುರಿಸಿ, ಈಗ ಮತ್ತೆ ಪ್ರದರ್ಶನ ನೀಡಲಾಂಭಿಸಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಹೈಬ್ರಿಡ್ ಮಾದರಿ ಪ್ರದರ್ಶನ ಹಾಗೂ ಕ್ರಿಯಾತ್ಮಕ ಮಾದರಿಗಳ ಮೂಲಕ ಈಗ ಬೆಂಗಳೂರಿನಲ್ಲಿ ಕೋವಿಡ್ ಬಳಿಕ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. 

ಬೆಂಗಳೂರಿನ ಮೈಸೂರು ರಸ್ತೆ, ಕೆಂಗೇರಿ ಮೆಟ್ರೋ ನಿಲ್ದಾಣದ ಸಮೀಪದ ಬಸ್ ಟರ್ಮಿನಲ್ ಬಳಿ ಸಾಂಪ್ರದಾಯಿಕ ಸರ್ಕಸ್ ಕೌಶಲ್ಯ ಮತ್ತು ಸಾಹಸಗಳ ಪರಿಚಯವಿಲ್ಲದ ಹೊಸ ಪೀಳಿಗೆಯ ಮಕ್ಕಳಿಗೆ ಹಾಗು ಯುವಜನರಿಗೆ ಸೇರಿದಂತೆ ಸರ್ಕಸ್ ಪ್ರೇಮಿಗಳಿಗೆ ಕಲಾವಿದರು ಸರ್ಕಸ್ ರಸದೌತಣ ಬಡಿಸಲಿದ್ದಾರೆ. ಅಕ್ಟೋಬರ್ 23 ರವರೆಗೆ ಪ್ರದರ್ಶನ ಮದ್ಯಾಹ್ನ 1 ಗಂಟೆ, ಸಾಯಂಕಾಲ 4 ಗಂಟೆ ಮತ್ತು ರಾತ್ರಿ 7 ಗಂಟೆಗೆ ನಡೆಯುತ್ತದೆ. 

ಸರ್ಕಸ್ ಎಂಬ ಮ್ಯಾಜಿಕ್ ವರ್ಲ್ಡ್ :
ಈ ಸರ್ಕಸ್ ಪ್ರದರ್ಶನದಲ್ಲಿ ಸುಮಾರು 60 ಕಲಾವಿದರು ಸುಮಾರು 120 ನಿಮಿಷಗಳ ಅವಧಿಯಲ್ಲಿ ಪ್ರೇಕ್ಷಕರನ್ನು ಸಮ್ಮೋಹನಗೊಳಿಸುವ ಮತ್ತು ಮಂತ್ರಮುಗ್ದಗೊಳಿಸುವ ಪ್ರದರ್ಶನ ನೀಡುತ್ತಾರೆ. ನೋಡುಗರನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತಾರೆ. ಸ್ಕೇಟಿಂಗ್, ಲ್ಯಾಡರ್ ಬ್ಯಾಲೆನ್ಸ್, ಕ್ಯೂಬ್ ಜಗ್ಲಿಂಗ್, ರೋಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್ ರೋಪ್ ಪ್ರದರ್ಶನಗಳು ಪ್ರೇಕ್ಷಕರನ್ನು ಹೊಸ ಜಗತ್ತಿಗೆ ಕೊಂಡೊಯ್ಯುತ್ತದೆ ಎಂದು ರಾಂಬೋ ಸರ್ಕಸ್ ಮಾಲೀಕ ಸುಜಿತ್ ದಿಲೀಪ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SCROLL FOR NEXT