ರಾಜ್ಯ

ಉತ್ತರಕಾಶಿ: ಹಿಮಪಾತದಲ್ಲಿ ಸಾವನ್ನಪ್ಪಿದ್ದ ಇಬ್ಬರು ಕನ್ನಡಿಗರ ಮೃತದೇಹ ಬೆಂಗಳೂರಿಗೆ!

Srinivasamurthy VN

ಬೆಂಗಳೂರು: ಕಳೆದ ಮಂಗಳವಾರ ಉತ್ತರಾಖಂಡದ ಗಡಿ ಜಿಲ್ಲೆ ಉತ್ತರಕಾಶಿಯಲ್ಲಿ ಸಂಭವಿಸಿದ ಹಿಮಪಾತ ದುರಂತದಲ್ಲಿ ಸಾವನ್ನಪ್ಪಿದ್ದ ಕರ್ನಾಟಕ ಮೂಲದ ಇಬ್ಬರು ಪರ್ವತಾರೋಹಣ ಪ್ರಶಿಕ್ಷಣಾರ್ಥಿಗಳ ಶವಗಳನ್ನು ಸೋಮವಾರ ಬೆಂಗಳೂರಿಗೆ ತರಲಾಯಿತು.

ಉತ್ತರಾಖಂಡದ ಮೌಂಟ್ ದ್ರೌಪದಿ ಕಾ ದಂಡ-II ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಾವನ್ನಪ್ಪಿದ ಬೆಂಗಳೂರಿನ ಇಬ್ಬರು ಪರ್ವತಾರೋಹಣ ಪ್ರಶಿಕ್ಷಣಾರ್ಥಿಗಳ ಶವಗಳನ್ನು ಸೋಮವಾರ ನಗರಕ್ಕೆ ತರಲಾಗಿದೆ. ಬೆಂಗಳೂರಿನ ನಿವಾಸಿಗಳಾದ ರಕ್ಷಿತ್ ಕೆ (26 ವರ್ಷ) ಮತ್ತು ವಿಕ್ರಮ್ ಎಂ (33 ವರ್ಷ), ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ನಲ್ಲಿ ಅಡ್ವಾನ್ಸ್ ಮೌಂಟೇನಿಯರಿಂಗ್ ಕೋರ್ಸ್ ಅನ್ನು ತೆಗೆದುಕೊಂಡ 34 ಪ್ರಶಿಕ್ಷಣಾರ್ಥಿಗಳ ಭಾಗವಾಗಿದ್ದರು. 

ಇಲ್ಲಿನ ದ್ರೌಪದಿಯ ದಂಡ-2 ಪ್ರದೇಶಕ್ಕೆ ನೆಹರೂ ಪರ್ವತಾರೋಹಣ ಸಂಸ್ಥೆಯ 40 ಜನ ಪರ್ವತಾರೋಹಿಗಳ ತಂಡ ತೆರಳಿತ್ತು. ಅಕ್ಟೋಬರ್ 4 ರಂದು ಮುಂಜಾನೆ 4 ಗಂಟೆಗೆ, ಪ್ರಶಿಕ್ಷಣಾರ್ಥಿಗಳು ಮತ್ತು ಬೋಧಕರು ಮೌಂಟ್ ದ್ರೌಪದಿ ಕಾ ದಂಡ-II (17,000 ಅಡಿ) ಎತ್ತರದ ನ್ಯಾವಿಗೇಷನ್‌ಗೆ ತೆರಳಿದ್ದರು. ಈ ವೇಳೆ ಪರ್ವತ ಶಿಖರದಿಂದ ಹಿಂತಿರುಗುತ್ತಿದ್ದಾಗ, ಶಿಬಿರ-1 ರ ಮೇಲೆ ಸಂಭವಿಸಿದ ಹಿಮಕುಸಿತದಲ್ಲಿ ಪ್ರಶಿಕ್ಷಣಾರ್ಥಿಗಳು ಮತ್ತು ಬೋಧಕರು ಸಿಲುಕಿದರು.  

8.45ರ ವೇಳೆಗೆ ಮೂವತ್ನಾಲ್ಕು ಪ್ರಶಿಕ್ಷಣಾರ್ಥಿಗಳು ಮತ್ತು ಏಳು ಮಂದಿ ಬೋಧಕರು ಹಿಮಕುಸಿತಕ್ಕೆ ಸಿಲುಕಿದರು. ಪರಿಣಾಮ ಎಲ್ಲ ಪರ್ವತಾರೋಹಿಗಳು ಹಿಮಪಾತಕ್ಕೆ ಸಿಲುಕಿದ್ದು, ಈವರೆಗೂ ದುರ್ಘಟನೆಯಲ್ಲಿ 29 ಮಂದಿ‌ ಸಾವನ್ನಪ್ಪಿದ್ದಾರೆ. ಈ ಪೈಕಿ 27 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ, ಅದರಲ್ಲಿ 21 ದೇಹಗಳನ್ನು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರನ್ನು ಬೆಂಗಳೂರು ನಗರ ಜಿಲ್ಲೆಯ ನಿವಾಸಿಗಳಾದ ರಕ್ಷಿತ್ ಮತ್ತು ವಿಕ್ರಮ್ ಎಂದು ಗುರುತಿಸಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅಧಿಕಾರಿಯೊಬ್ಬರು, 'ಮೃತರ ಪೋಷಕರು ಮತ್ತು ಸಂಬಂಧಿಕರು ಪಾರ್ಥಿವ ಶರೀರವನ್ನು ಸ್ವೀಕರಿಸಲು ಉತ್ತರಕಾಶಿ ತಲುಪಿದರು. ಭಾನುವಾರ ಶವಪರೀಕ್ಷೆಯ ನಂತರ ಮೃತದೇಹಗಳನ್ನು ಡೆಹ್ರಾಡೂನ್‌ನಿಂದ ಬೆಂಗಳೂರಿಗೆ ವಿಮಾನದ ಮೂಲಕ ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳಿದರು. ರಕ್ಷಿತ್ ಅವರ ಪಾರ್ಥಿವ ಶರೀರವನ್ನು ಸಂಜೆ 4.40 ಕ್ಕೆ ನಗರಕ್ಕೆ ತರಲಾಗಿದ್ದರೆ, ವಿಕ್ರಮ್ ಅವರ ದೇಹವನ್ನು ರಾತ್ರಿ 9.15 ಕ್ಕೆ ತಲುಪಿಸಲಾಗಿದೆ ಎಂದರು.

ಏತನ್ಮಧ್ಯೆ, ಮೃತದೇಹಗಳನ್ನು ವಿಮಾನದಲ್ಲಿ ಸಾಗಿಸುವ ಎಲ್ಲಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಇಲಾಖೆಯು ಇಬ್ಬರ ಕುಟುಂಬಕ್ಕೆ ಎಲ್ಲಾ ಬೆಂಬಲವನ್ನು ನೀಡಿದೆ ಎಂದು ಕಂದಾಯ ಸಚಿವ ಆರ್ ಅಶೋಕ ಈ ಹಿಂದೆ ಹೇಳಿದ್ದಾರೆ.
 

SCROLL FOR NEXT