ರಾಜ್ಯ

ಅಮೃತ ನಗರೋತ್ಥಾನ: 299 ಸ್ಥಳೀಯ ಸಂಸ್ಥೆ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ

Nagaraja AB

ಬೆಂಗಳೂರು: ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ ರಾಜ್ಯದ 299  ನಗರ ಸ್ಥಳೀಯ ಸಂಸ್ಥೆಗಳ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ  ಸಚಿವ ಎಂಟಿಬಿ ನಾಗರಾಜು ಅವರ ಅಧ್ಯಕ್ಷತೆಯ ಸಮಿತಿ ಅನುಮೋದನೆ ನೀಡಿದೆ.

ವಿಧಾನಸೌಧದಲ್ಲಿ ಇಂದು ನಡೆದ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ 4ನೇ ಹಂತದ ಯೋಜನೆಗಳ ರಾಜ್ಯ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಸಚಿವ ಎಂಟಿಬಿ ನಾಗರಾಜು, ಈಗಾಗಲೇ ಅನುಮೋದನೆ ನೀಡಿರುವ  271 ಸ್ಥಳೀಯ ಸಂಸ್ಥೆಗಳಲ್ಲಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.150 ಕಾಮಗಾರಿಗಳ ಕಾರ್ಯಾದೇಶ ನೀಡಿಕೆಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ಟೆಂಡರ್ ಪ್ರಕ್ರಿಯೆಯನ್ನು ಚುರುಕುಗೊಳಿಸಿ  ಕಾಮಗಾರಿಗಳನ್ನು ಆದಷ್ಟು ಬೇಗ ಆರಂಭಿಸುವಂತೆ ನಿರ್ದೇಶನ ನೀಡಿದರು.

ಇಂದಿನ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಳ ನಗರಸಭೆಯ 19.36 ಕೋಟಿ. ರೂ, ಸೋಮೇಶ್ವರ ಪುರಸಭೆಯ 8.5 ಕೋಟಿ ರೂ,ಕೋಟೆಕಾರು ಪಟ್ಟಣ ಪಂಚಾಯಿತಿಯ 4.25 ಕೋಟಿ ರೂ, ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ಸದಲಗಾ ಪುರಸಭೆಗಳ ತಲಾ 8.5 ಕೋಟಿ ರೂಪಾಯಿಗಳ,ರಾಯಚೂರು ಜಿಲ್ಲೆಯ ಮಾನವಿ ಪುರಸಭೆಯ 8.5 ಕೋಟಿ ರೂ,ಕವಿತಾಳ ಪಟ್ಟಣ ಪಂಚಾಯತಿಯ 4.25 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4ನೇ ಹಂತದ ಯೋಜನೆಯ 3885 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ  ಅನುಮೋದನೆ ನೀಡಿತ್ತು. ಅದಕ್ಕೆ ಪೂರಕವಾಗಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಕ್ರಿಯಾ ಯೋಜನೆಗಳು ಸಲ್ಲಿಕೆಯಾಗಿವೆ.

ಈ ಯೋಜನೆಯಡಿ 117 ಪಟ್ಟಣ ಪಂಚಾಯತಿಗಳು ತಲಾ 5 ಕೋಟಿ ರೂ., 124 ಪುರಸಭೆಗಳು ತಲಾ 10 ಕೋಟಿ ರೂ. ಹಾಗೂ 38 ನಗರಸಭೆಗಳು ತಲಾ 30 ಕೋಟಿ ರೂ., 23 ಜಿಲ್ಲಾ ಕೇಂದ್ರದ ನಗರಸಭೆಗಳು ಮತ್ತು 1ನೇ ದರ್ಜೆ ನಗರಸಭೆಗಳು ತಲಾ 40 ಕೋಟಿ ರೂ. ಪಡೆಯಲಿವೆ. ಈ ಹಣದಲ್ಲಿ 2022-23 ರಿಂದ 2023-24ನೇ ಸಾಲಿನ ಹಣಕಾಸು ವರ್ಷದವರೆಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಮಳೆ ನೀರು ಚರಂಡಿ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಹಾಗೂ ಇತರೇ ಕಾಮಗಾರಿಗಳನ್ನು  ಕೈಗೊಳ್ಳಲಿವೆ.

SCROLL FOR NEXT