ರಾಜ್ಯ

ಹಾಸನದ ಅರಸೀಕೆರೆ ಬಳಿ ಭೀಕರ ಅಪಘಾತ: ಟ್ಯಾಂಕರ್ ಚಾಲಕ ಪೊಲೀಸರ ವಶಕ್ಕೆ, ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ

Sumana Upadhyaya

ಬೆಂಗಳೂರು: ಧರ್ಮಸ್ಥಳ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ ದೇಗುಲ ಬಳಿಕ ಹಾಸನಾಂಬೆಯ ದರ್ಶನ ಮಾಡಿ ತಮ್ಮೂರು ಹಾಸನದ ಅರಸೀಕೆರೆಯ ಬಾಣಾವರಕ್ಕೆ ಖುಷಿಯಿಂದ ಇನ್ನೇನು ತಲುಪಬೇಕೆನ್ನುವಷ್ಟರಲ್ಲಿ ಜವರಾಯನ ಕರೆಗೆ ಓಗೊಟ್ಟು ಕಳೆದ ತಡರಾತ್ರಿ ಮೃತಪಟ್ಟ 9 ಮಂದಿಯ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಹಾಗೂ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಆದೇಶ ನೀಡಲಾಗಿದೆ, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಅಲ್ಲಿನ ಎಸ್ಪಿ ಜೊತೆ ಮಾತನಾಡಿದ್ದೇನೆ ಎಂದರು. 

ಮೃತರ ಮರಣೋತ್ತರ ಪರೀಕ್ಷೆ ಇಂದು ಬೆಳಗ್ಗೆ ನೆರವೇರಿ ಈಗ ಸ್ವಗ್ರಾಮಕ್ಕೆ ತಲುಪಿದ್ದು ಅಲ್ಲಿ ಕುಟುಂಬಸ್ಥರು, ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ. ಸಾಲಾಪುರ, ದೊಡ್ಡೇನಹಳ್ಳಿ ಮತ್ತು ಬಾಣಾವರ ಅವರವರ ಊರುಗಳಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಟ್ಯಾಂಕರ್ ಚಾಲಕ ಪೊಲೀಸರ ವಶ: ಹಾಸನದ ಅರಸೀಕೆರೆ ಬಳಿ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿನ ಟ್ಯಾಂಕರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಟೆಂಪೋ ಟ್ರಾವೆಲರ್, ಹಾಲಿನ ಲಾರಿ ಹಾಗೂ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 9 ಜನರ ದಾರುಣವಾಗಿ ಮರಣ ಕಂಡಿದ್ದಾರೆ. ಒನ್ ವೇನಲ್ಲಿ ಬಂದು ಅಪಘಾತಕ್ಕೆ ಕಾರಣವಾಗಿದ್ದ ಹಾಲಿನ ಟ್ಯಾಂಕರ್ ಚಾಲಕ ನವೀನ್, ಅಪಘಾತ ನಂತರ ವಾಹನ ಬಿಟ್ಟು ಪರಾರಿಯಾಗಿದ್ದನು. ಇದೀಗ ನವೀನ್‍ನನ್ನು ಬಾಣಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

SCROLL FOR NEXT