ರಾಜ್ಯ

ಪರೇಶ್​​ ಮೆಸ್ತಾ ಸಾವು ಕೋಮು ಗಲಭೆಯಿಂದಾದ ಹತ್ಯೆಯಲ್ಲ: ಸಿಬಿಐ ತನಿಖಾ ವರದಿಯಲ್ಲಿ ಉಲ್ಲೇಖ

Lingaraj Badiger

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಪರೇಶ್​​ ಮೇಸ್ತಾ ಸಾವು ಆಕಸ್ಮಿಕ,‌ ಯಾವುದೇ ಕೋಮು ಗಲಭೆಯಲ್ಲಿ ನಡೆದ ಹತ್ಯೆಯಲ್ಲ ಎಂದು ಸಿಬಿಐ ತನ್ನ ತನಿಖಾ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

ಪರೇಶ್​​ ಮೇಸ್ತಾ ಗಲಭೆ ವೇಳೆ ಓಡುತ್ತಿದ್ದಾಗ ಶೆಟ್ಟಿಕೆರೆಯಲ್ಲಿ ಜಾರಿ ಬಿದ್ದು, ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಸಿಬಿಐ ತನಿಖಾ ವರದಿಯಲ್ಲಿ ಬಹಿರಂಗಗೊಂಡಿದೆ. 

ಸಿಬಿಐ ಅಧಿಕಾರಿಗಳು ಮಂಗಳವಾರ ಹೊನ್ನಾವರದ ನ್ಯಾಯಾಲಯಕ್ಕೆ ಪ್ರಕರಣದ ವಿಸ್ತೃತ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ಮೇಸ್ತಾ ಕೊಲೆ ಮಡಲಾಗಿದೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆರೋಪಿಗಳನ್ನು ದೋಷ ಮುಕ್ತಗೊಳಿಸಬಹುದು ಎಂದು ಹೇಳಿದೆ.

ಸಿಬಿಐ ಅಧಿಕಾರಿಗಳು ಅಕ್ಟೋಬರ್​ 3 ರಂದು ಹೊನ್ನಾವರದ ನ್ಯಾಯಾಲಕಯಕ್ಕೆ ಪ್ರಕರಣದ ಮೊದಲ ವರದಿಯನ್ನು ಸಲ್ಲಿಸಿದ್ದರು. ಈ ವರದಿಯಲ್ಲಿ ಪರೇಶ್​​ ಮೇಸ್ತಾ ಸಾವು ಹತ್ಯೆಯಲ್ಲ, ಆಕಸ್ಮಿಕ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಸಿಬಿಐ ವರದಿ ಬಹಿರಂಗಗೊಂಡ ಬೆನ್ನಲ್ಲೆ ರಾಜ್ಯ ರಾಜಕೀಯದಲ್ಲಿ ತೀರ್ವ ಸಂಚಲನ ಉಂಟು ಮಾಡಿದ್ದು, ಬಿಜೆಪಿ ಯುವಕನ ಸಾವಿಗೆ ಧರ್ಮದ ಬಣ್ಣ ಕಟ್ಟಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದ್ದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.

ನಿಮಗೆ ಮಾನವೀಯತೆ ಇದ್ದರೆ ಪರೇಶ್ ಮೇಸ್ತ ಕುಟುಂಬದ ಕ್ಷಮೆ ಕೇಳಿ ಎಂದು ಬಿಜೆಪಿಗೆ ಒತ್ತಾಯಿಸಿದ ಪ್ರಿಯಾಂಕ್ ಖರ್ಗೆ, ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಇದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಹಾಗಿದ್ದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಕೋಮು ವಿಷಬೀಜ ಬಿತ್ತಿ ಯುವಕರ ಭವಿಷ್ಯ ಹಾಳು ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಶೋಭಾ ಕರಂದ್ಲಾಜೆ ಪರೇಶ್ ಮೇಸ್ತ ಸಾವಿಗೆ ಜಿಹಾದಿ ಶಕ್ತಿಗಳು ಕಾರಣ ಎಂದಿದ್ದರು. ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದಿದ್ದರು. ಪರೇಶ್ ಮೇಸ್ತ ಕೈ ಕಡಿಯಲಾಗಿದೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಇನ್ನೆಷ್ಟು ಹಿಂದೂ ಕಾರ್ಯಕರ್ತರ ಹತ್ಯೆ ನಡೆಯಬೇಕು ಎಂದು ಪ್ರಶ್ನೆ ಮಾಡಿದ್ದರು ಎಂದು ಹೇಳಿದರು.

SCROLL FOR NEXT