ರಾಜ್ಯ

ಬೆಂಗಳೂರಿನಲ್ಲಿ ದೀಪಾವಳಿ ಸಮಯದಲ್ಲಿ ದಿನಕ್ಕೆ 2 ತಾಸು ಮಾತ್ರ ಪಟಾಕಿ ಹಚ್ಚಲು ಅವಕಾಶ: ಸುತ್ತೋಲೆ

Sumana Upadhyaya

ಬೆಂಗಳೂರು: ಭಾನುವಾರದಿಂದ ದೀಪಾವಳಿ ಹಬ್ಬದ ಸಂಭ್ರಮ. ದೀಪಾವಳಿ ಹಾಗೆಂದು ಬೆಂಗಳೂರು ನಗರ ಪ್ರದೇಶದಲ್ಲಿ ರಾತ್ರಿಯಿಡೀ ಬೇಕಾಬಿಟ್ಟಿ ಪಟಾಕಿಗಳನ್ನು ಸಿಡಿಸುವಂತಿಲ್ಲ, ದೀಪಾವಳಿ ಸಂದರ್ಭದಲ್ಲಿ ಪ್ರತಿದಿನ ರಾತ್ರಿ 8 ರಿಂದ 10 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸುತ್ತೋಲೆ ಹೊರಡಿಸಿದೆ. ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಶಬ್ದ ಮಾಲಿನ್ಯವನ್ನು ಹೆಚ್ಚಿಸುವ ಪಟಾಕಿಗಳನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಪಟಾಕಿ ಸಿಡಿಸುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹಬ್ಬದ ಮುನ್ನ ಮತ್ತು ನಂತರದ ಎಲ್ಲಾ ಏಳು ದಿನಗಳಲ್ಲಿ ವಾಯು ಮತ್ತು ಶಬ್ದ ಮಾಲಿನ್ಯವನ್ನು ಅಳೆಯಲು ಎಲ್ಲಾ ಜಿಲ್ಲೆಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.

ನಗರದಲ್ಲಿ ಮಾಲಿನ್ಯವನ್ನು ಅಳೆಯುವ ಸಾಧನಗಳನ್ನು ಅಳವಡಿಸಲಾಗಿದೆ ಹಬ್ಬದ ದಿನಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಕ್ಟೋಬರ್ 17 ರಿಂದ 31 ರವರೆಗೆ ದಾಖಲಾಗುವ ವಾಯು ಮತ್ತು ಶಬ್ದ ಮಾಲಿನ್ಯವನ್ನು ನವೆಂಬರ್ 5 ರೊಳಗೆ ಕೆಎಸ್‌ಪಿಸಿಬಿಗೆ ಕಳುಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕೆಂಬ ನಿಯಮ ಕೂಡ ಜಾರಿಯಲ್ಲಿದ್ದು, ತಪ್ಪಿದಲ್ಲಿ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಮಾಲಿನ್ಯವನ್ನು ಅಳೆಯಲು ಬೆಂಗಳೂರು ನಗರ ಮತ್ತು ಜಿಲ್ಲೆಗಳಾದ್ಯಂತ ಸಾಧನಗಳನ್ನು ಅಳವಡಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ದೀಪಾವಳಿಯನ್ನು ಆಚರಿಸುವಾಗ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆಡಳಿತ ಅಧಿಕಾರಿಗಳಿಗೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

SCROLL FOR NEXT