ರಾಜ್ಯ

ಚೀನಾ ಲೋನ್ ಆ್ಯಪ್ ಕಂಪನಿ ಮೇಲೆ ಇಡಿ ದಾಳಿ: 78 ಕೋಟಿ ರೂ. ಜಪ್ತಿ

Manjula VN

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 5 ಚೀನಾ ಸಾಲ ಆ್ಯಪ್ ಕಂಪನಿಗಳು ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, ರೂ.78 ಕೋಟಿ ಜಪ್ತಿ ಮಾಡಿದ್ದಾರೆ.

ಚೀನಾ ಲೋನ್ ಆ್ಯಪ್ ವಿರುದ್ಧ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ 18 ಪ್ರಕರಣಗಳು ದಾಖಲಾಗಿದ್ದು, ಈ ಆಧಾರದ ಮೇಲೆ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದೇ ಪ್ರಕರಣ ಸಂಬಂಧ ಈ ವರೆಗೆ ರೂ.95 ಕೋಟಿ ಜಪ್ತಿ ಮಾಡಿದಂತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಚೀನಾ ಪ್ರಜೆಗಳು ಮೊಬೈಲ್ ಆ್ಯಪ್ ಸೃಷ್ಟಿಸಿ ಜನತೆಗೆ ಸಾಲ ನೀಡುತ್ತಿದ್ದರು. ಸಾಲ ಪಡೆದವರ ಮೊಬೈಲ್ ವಿವರ ಸೇರಿದಂತೆ ಹಲವು ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದರು. ಬಡ್ಡಿ ಸಮೇತ ಸಾಲ ಮರುಪಾವತಿಸಿದರೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದರು. 

ಹಣ ನೀಡದಿದ್ದರೆ ಮೊಬೈಲ್ ನಲ್ಲಿನ ಪರಿಚಿತರ ನಂಬರ್'ಗೆ ಅಶ್ಲೀಲ ಸಂದೇಶ ಕಳುಹಿಸಿ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ 18 ಎಫ್ಐಆರ್ ದಾಖಲಾಗಿದ್ದವು. ಈ ಬಗ್ಗೆ ತನಿಖೆ ನಡೆಸಿದಾಗ ಅಕ್ರಮ ಹಣ ವರ್ಗಾವಣೆ ನಡೆದಿರುವುದು ತಿಳಿದುಬಂದಿತ್ತು. 

ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಭಾರತೀಯ ಪ್ರಜೆಗಳ ನಕಲಿ ದಾಖಲೆ ಬಳಸಿ ನಕಲಿ ನಿರ್ದೇಶಕರನ್ನು ನೇಮಿಸಿಕೊಂಡಿದ್ದು, ಕೆಲ ವ್ಯಾಪಾರಿಗಳ ಐಡಿಗಳನ್ನು ಬಳಸಿ ಅವರ ಬ್ಯಾಂಕ್ ಖಾತೆಗಳ ಮೂಲಕ ಅಪರಾಧ ಕೃತ್ಯಕ್ಕೆ ಹಣಕಾಸಿನ ವ್ಯವಹಾರ ನಡೆಸಿರುವುದು ಕಂಡು ಬಂದಿದೆ. ಕೆವೈಸಿ ದಾಖಲೆಗಳಲ್ಲಿ ನಕಲಿ ವಿಳಾಸ ನಮೂದಿಸಿರುವುದು ಕೂಡ ತನಿಖೆ ವೇಳೆ ಪತ್ತೆಯಾಗಿದೆ.

SCROLL FOR NEXT