ರಾಜ್ಯ

ಕಾನೂನುಗಳು ಸರಳವಾಗಿರಬೇಕಿದ್ದು, ಇದು ಕಾನೂನು ರೂಪಿಸುವವರ ಜವಾಬ್ದಾರಿಯಾಗಿದೆ: ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು/ಚಿತ್ರದುರ್ಗ: ಕಾನೂನುಗಳು ಸರಳವಾಗಿರಬೇಕು. ಕಾನೂನಿನಲ್ಲಿ ಗೊಂದಲ ಕಡಿಮೆಯಿದ್ದು, ಹೆಚ್ಚು ಸ್ಪಷ್ಟತೆ ಇರುವಂತೆ ಕಾನೂನು ರಚಿಸಬೇಕು. ಇದು ಕಾನೂನು ರೂಪಿಸುವವರ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದರು. 

ಹೊಸದುರ್ಗ ನ್ಯಾಯಾಲಯದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಾಧೀಶರು ಮತ್ತು ವಕೀಲರು ನ್ಯಾಯಾಲಯದ ತೀರ್ಪಿನ ಪ್ರಸ್ತುತತೆಯನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಬೇಕು. ಜಲ ವಿವಾದಗಳ ಕುರಿತು, ಕರ್ನಾಟಕಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳು ಎರಡು ಮೂರು ದಶಕಗಳಿಂದ ನ್ಯಾಯಮಂಡಳಿಗಳಲ್ಲಿ ಸಿಲುಕಿಕೊಂಡಿವೆ. ಅವುಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಇದರಿಂದ ಜಲಮೂಲಗಳು ವ್ಯರ್ಥವಾಗುತ್ತಿವೆ. ಈ ನಿಟ್ಟಿನಲ್ಲಿ ಯಾವುದೇ ಬದಲಾವಣೆಗಳಾಗದಿದ್ದರೆ, ಸರ್ಕಾರ, ನ್ಯಾಯಾಧೀಶರು ಮತ್ತು ನ್ಯಾಯಾಂಗಕ್ಕೆ ಸಮಸ್ಯೆಯಾಗುತ್ತದೆ ಎಂದು ಹೇಳಿದರು.

ಸುಧಾರಿತ ತಂತ್ರಜ್ಞಾನದ ನೆರವಿನಿಂದ ತ್ವರಿತ ನ್ಯಾಯಾಲಯಗಳು ಮತ್ತು ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗಿದೆ. ನ್ಯಾಯವಾದಿಗಳು ತಳಮಟ್ಟದಲ್ಲಿ ಸೂಕ್ತ ಕಾನೂನು ಮಾರ್ಗದರ್ಶನ ಮತ್ತು ಸಹಕಾರವನ್ನು ಪಡೆಯುವ ಅವಶ್ಯಕತೆಯಿದೆ ಎಂದು ತಿಳಿಸಿದರು.

ಸಮಾಜದಲ್ಲಿ ವಿವಾದಗಳು ಹೆಚ್ಚುತ್ತಿದ್ದು, ಜನರು ನ್ಯಾಯ ಪಡೆಯಲು ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದು ದೇಶದ ಪ್ರಗತಿಗೆ ಅಡ್ಡಿಯಾಗುತ್ತಿದೆ. ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ, ನ್ಯಾಯವನ್ನು ಖಾತರಿಪಡಿಸುವುದು ಸಾಕಷ್ಟು ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ ಭಾರತವು ಅತ್ಯುತ್ತಮ ಕಾನೂನು ವ್ಯವಸ್ಥೆಯನ್ನು ಹೊಂದಿದ್ದು, ಅದನ್ನು ಮತ್ತಷ್ಟು ಬಲಪಡಿಸಬೇಕಿದೆ. ನ್ಯಾಯಾಂಗಕ್ಕೂ ಸುಧಾರಣೆಗಳ ಅಗತ್ಯವಿದೆ ಎಂದಿದ್ದಾರೆ.

SCROLL FOR NEXT