ರಾಜ್ಯ

ತುಮಕೂರಿನಲ್ಲಿ ಎಲ್ಲೆಡೆ ಹಬ್ಬಿದ ಮಕ್ಕಳ ಅಪಹರಣ ಸುದ್ದಿ: ಸ್ಥಳಕ್ಕೆ ಎಸ್'ಪಿ ಭೇಟಿ, ಪರಿಶೀಲನೆ

Manjula VN

ತುಮಕೂರು: ಮಕ್ಕಳ ಅಪಹರಣ ಸುದ್ದಿಯನ್ನು ವದಂತಿಯೆಂದು ಪೊಲೀಸರು ತಳ್ಳಿಹಾಕಿದ್ದು, ಇದರ ಬೆನ್ನಲ್ಲೇ ತಂಡವೊಂದು ನಡೆಸಿದ ಅಪಹರಣ ಯತ್ನಕ್ಕೆ ಎದೆಗುಂದದೆ ಇಬ್ಬರು ಮಕ್ಕಳು ಪರಾರಿಯಾಗಿರುವ ಹುಳಿಯಾರು ಹೋಬಳಿಯ ಬೆಳ್ಳಾರದ ಬಳಿ ಶನಿವಾರ ನಡೆದಿದೆ.

ಪ್ರತಿ ದಿನದಂತೆ ಬೆಳ್ಳಾರ ಸೇತುವೆ ಬಳಿ ಇರುವ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಶನಿವಾರದ ಬೆಳಗ್ಗಿನ ಕ್ಲಾಸ್ ಮುಗಿಸಿಕೊಂಡು ತಮ್ಮ ಊರು ಬೆಳ್ಳಾರ ಮೇಗಲಗೊಲ್ಲರಹಟ್ಟಿಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ.

ಮಕ್ಕಳು ನಡೆದುಕೊಂಡು ಹೋಗುವಾಗ ಬೂದು ಬಣ್ಣದ ಕಾರನ್ನು ಮಕ್ಕಳ ಬಳಿ ನಿಲ್ಲಿಸಿ ಮುಸುಕುಧಾರಿಗಳಿಬ್ಬರು ಇಳಿದು ಮಕ್ಕಳ ಕೈ ಹಿಡಿದು ಎಳೆದಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿರೋಧ ತೋರಿ ಕೈ ಬಿಡಿಸಿಕೊಂಡಾಗ ಪಕ್ಕದ ಮುಳ್ಳಿನ ಪೊದೆಗೆ ಮಕ್ಕಳು ಬಿದ್ದಿರುವುದನ್ನು ಕಂಡು ಅಪರಿಚಿತರು ಕಾರು ಹತ್ತಿ ಚಿಕ್ಕನಾಯಕನಹಳ್ಳಿ ಕಡೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಲೋಹಿತ್ ಮತ್ತು ಹರ್ಷಿತ್ ಎಂಬ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ತರಚು ಗಾಯಗಳಾಗಿವೆ. ಅಲ್ಲದೆ ಕಾರಿನಲ್ಲಿ ಇನ್ನೂ ಮೂವರು ಮಕ್ಕಳಿದ್ದಾರೆ ಎಂದು ಮಕ್ಕಳು ಮಾಹಿತಿ ನೀಡಿದ್ದಾರೆ. 

ಈ ಬಗ್ಗೆ ದಾರಿ ಹೋಕರಾದ ಬಸವರಾಜು ಎಂಬವರಿಗೆ ಮಕ್ಕಳು ವಿಷಯ ಮುಟ್ಟಿಸಿದಾಗ ಪೊಲೀಸರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಕ್ಕಳಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

“ಘಟನೆ ನಡೆದ ಕೂಡಲೇ 11.30 ರ ಸುಮಾರಿಗೆ ನಾವು ಸಹಾಯವಾಣಿ ಸಂಖ್ಯೆ 112 ಗೆ ಡಯಲ್ ಮಾಡಿದೆವು, ಆದರೆ ಪೊಲೀಸರು ಮಧ್ಯಾಹ್ನ 2 ಗಂಟೆಗೆ ಬಂದರು. ಶೀಘ್ರ ಸ್ಪಂದಿಸಿದ್ದರೆ ಚಿಕ್ಕನಾಯಕನಹಳ್ಳಿ ಕಡೆ ಹೊರಟಿದ್ದ ತಂಡವನ್ನು ಹಿಡಿಯಬಹುದಿತ್ತು’ ಎಂದು ಸಾಮಾಜಿಕ ಕಾರ್ಯಕರ್ತ ಲಕ್ಕೇನಹಳ್ಳಿ ಮಂಜುನಾಥ್ ಆರೋಪಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಪೋಷಕರು ಆತಂಕಗೊಂಡಿದ್ದು, ಪ್ರಕರಣ ಬೇಧಿಸುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆದುಕೊಂಡು, ಗ್ರಾಮಸ್ಥರಿಗೆ ಸಮಾಧಾನ ಹೇಳಿದರು.

SCROLL FOR NEXT