ರಾಜ್ಯ

ಪೋಸ್ಟಿಂಗ್‌ಗೆ ಹಣ: ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಾವು ಪ್ರಕರಣದ ತನಿಖೆ ಡಿಜಿಪಿಗೆ; ಸಿಎಂ ಬಸವರಾಜ ಬೊಮ್ಮಾಯಿ

Ramyashree GN

ಬೆಂಗಳೂರು: ಅಮಾನತುಗೊಂಡ ಪೊಲೀಸ್ ಇನ್ಸ್‌ಪೆಕ್ಟರ್ ಸಾವಿನ ಪ್ರಕರಣದ ಕುರಿತು ಗಮನ ಹರಿಸುವಂತೆ ಮತ್ತು ಅಗತ್ಯವಿದ್ದರೆ ತನಿಖೆ ನಡೆಸುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.

ವೈರಲ್ ಆಗಿರುವ ಉದ್ದೇಶಿತ ವೀಡಿಯೊ ಸಂಭಾಷಣೆ ನಂತರ, ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿ(ಎಸ್) ಸಾವಿನ ಕುರಿತು ನ್ಯಾಯಾಂಗ ಮತ್ತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿವೆ.

ವೈರಲ್ ಆಗಿದ್ದ ವಿಡಿಯೋದಲ್ಲಿ, ಅಧಿಕಾರಿಯ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಚಿವ ಎಂಟಿಬಿ ನಾಗರಾಜ್ ಅವರು, ಪೋಸ್ಟಿಂಗ್ ಪಡೆಯಲು 70 ರಿಂದ 80 ಲಕ್ಷ ಕೊಟ್ಟು ಬಂದರೆ  ಹೃದಯಾಘಾತವಾಗದೆ ಇನ್ನೇನಾಗುತ್ತದೆ. ಈ ಒತ್ತಡದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳುವುದು ಕಂಡುಬಂದಿತ್ತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, 'ನಮ್ಮ ಡಿಜಿ (ಪೊಲೀಸ್ ಮಹಾನಿರ್ದೇಶಕರು) ನಗರದಲ್ಲಿ ಇರಲಿಲ್ಲ, ನಿನ್ನೆ ರಾತ್ರಿ ವಾಪಸ್ಸಾಗಿದ್ದಾರೆ. ಇಂದು ಎಲ್ಲ ಮಾಹಿತಿ ಕಲೆಹಾಕುವಂತೆ ಸೂಚನೆ ನೀಡುತ್ತೇನೆ. ಏನಾದರೂ ಸಿಕ್ಕರೆ ವಿಚಾರಣೆ ನಡೆಸಬೇಕು. ಅದರಲ್ಲಿ ನಾವು ಯಾವುದೇ ಹಿಂಜರಿಕೆ ತೋರಿಸುವುದಿಲ್ಲ ಎಂದಿದ್ದಾರೆ.

ಸಚಿವ ಎಂಟಿಬಿ ನಾಗರಾಜ್ ಅವರ ಹೇಳಿಕೆಗಳ ಮೇಲೆ ಪ್ರತಿಪಕ್ಷಗಳು ಬೊಮ್ಮಾಯಿ ನೇತೃತ್ವದ ಸರ್ಕಾರವು ಪ್ರತಿ ಪೋಸ್ಟಿಂಗ್‌ಗೆ ದರವನ್ನು ನಿಗದಿಪಡಿಸುವ ಮೂಲಕ ಭ್ರಷ್ಟಾಚಾರ ಮತ್ತು "ಪೋಸ್ಟಿಂಗ್‌ಗಾಗಿ" ಹಗರಣದಲ್ಲಿ ತೊಡಗಿದೆ ಎಂದು ಆರೋಪಿಸಿದೆ.
 

ಏನಿದು ಪ್ರಕರಣ?

ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತುಗೊಂಡಿದ್ದ ಕೆಆರ್ ಪುರಂ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ಎಚ್.ಎಲ್ ಅವರು ತೀವ್ರ ಹೃದಯಾಘಾತದಿಂದ ಅಕ್ಟೋಬರ್ 27ರಂದು ಮೃತಪಟ್ಟಿದರು. ಸೇವೆಯಿಂದ ಅಮಾನತುಗೊಂಡ ಬಳಿಕ ನಂದೀಶ್ ಅವರು ಖಿನ್ನತೆಗೆ ಒಳಗಾಗಿದ್ದು ಅದೇ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಹುಣಸೂರು ಮೂಲದ ಇನ್ಸ್ ಪೆಕ್ಟರ್ ನಂದೀಶ್ ಇತ್ತೀಚೆಗೆ ಪಬ್‌ವೊಂದು ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು.

ಕೆ.ಆರ್.ಪುರಂ ಠಾಣಾ ವ್ಯಾಪ್ತಿಯ ಟಾನಿಕ್ ಬಾರ್ ರಾತ್ರಿ 2 ಗಂಟೆಯ ವರೆಗೂ ತೆರೆದಿತ್ತು. ಈ ಕುರಿತು ಮಾಹಿತಿ ಕಲೆಹಾಕಿದ್ದ ಸಿಸಿಬಿ ಅಧಿಕಾರಿಗಳು ಬಾರ್ ಮೇಲೆ ದಾಳಿ ನಡೆಸಿದ್ದು, ಮಾಲೀಕರ ವಿರುದ್ದ ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ ಒಂದು ಗಂಟೆವರೆಗೆ ಬಾರ್ ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಈ ಬಾರ್ ಮಾತ್ರ ರಾತ್ರಿ 2 ಗಂಟೆಯವರೆಗೂ ಕಾರ್ಯನಿರ್ವಹಿಸುತ್ತಿತ್ತು. ಈ ವಿಚಾರ ಇನ್ಸ್‌ಪೆಕ್ಟರ್ ನಂದೀಶ್ ಅವರ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.

SCROLL FOR NEXT