ರಾಜ್ಯ

ವೈದ್ಯಕೀಯ ತಪಾಸಣೆಗೆ ಕರೆತಂದಿದ್ದ ಮುರುಘಾ ಶ್ರೀಗಳು ಐಸಿಯುಗೆ ಶಿಫ್ಟ್: 1 ದಿನ ನ್ಯಾಯಾಂಗ ಬಂಧನ

Sumana Upadhyaya

ಚಿತ್ರದುರ್ಗ: ಪೋಕ್ಸೊ ಕಾಯ್ದೆಯಡಿ ಬಂಧಿತಕ್ಕೊಳಗಾಗಿರುವ ಮುರುಘಾ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಶರಣರು ಚಿತ್ರದುರ್ಗದ ಕಾರಾಗೃಹಕ್ಕೆ ಸೇರಿದ ಬೆನ್ನಲ್ಲೇ ಎದೆನೋವು ಕಾಣಿಸಿಕೊಂಡು ಆರೋಗ್ಯದಲ್ಲಿ ಏರುಪೇರು ಆದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಯ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ಸಿಬ್ಬಂದಿ ಐಸಿಯುಗೆ ಸ್ಥಳಾಂತರಿಸಿದ್ದಾರೆ. 

ಇಂದು ಬೆಳಗ್ಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸತತ 2 ಗಂಟೆಗಳ ಕಾಲ ಶ್ರೀಗಳ ತಪಾಸಣೆ ನಡೆಸಿದ ಮೂವರು ವೈದ್ಯರ ತಂಡ. ಚೆಸ್ಟ್ ಸ್ಕ್ಯಾನ್, ಇಸಿಜಿ, ಎಕೊ, ಎಂ ಆರ್ ಐ ಸ್ಕ್ಯಾನ್ ಹೀಗೆ ಹಲವು ಪರೀಕ್ಷೆಗಳನ್ನು ನಡೆಸಿದರು. ಶ್ರೀಗಳು ಎದೆನೋವು ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ಆರೋಗ್ಯ ಸೂಕ್ಷ್ಮ ಪರಿಸ್ಥಿತಿಯಲ್ಲಿರುವುದರಿಂದ ಇದೀಗ ಐಸಿಯುಗೆ ವರ್ಗಾಯಿಸಲಾಗಿದೆ.

ಇತ್ತ ಮುರುಘಾ ಮಠದಲ್ಲಿ ನೀರವ ಮೌನ ಆವರಿಸಿದೆ. ಎಸ್ ಜೆಎಂ ವಿದ್ಯಾಪೀಠದ ಉದ್ಯೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ. ವೀರಶೈವ ಸಮಾಜದ ಮುಖಂಡರು, ರಾಜ್ಯದ ನಾನಾಕಡೆಯ ಮುರುಘಾ ಶ್ರೀಗಳ ದರ್ಶನ ಪಡೆಯಬೇಕೆಂದು ಆಸ್ಪತ್ರೆಯತ್ತ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕ್ಷಣಕ್ಷಣಕ್ಕೂ ಆಸ್ಪತ್ರೆ ಆವರಣದಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ.

ನ್ಯಾಯಾಂಗ ಬಂಧನ: ಪೋಕ್ಸೋ ಕಾಯ್ದೆಯಡಿ ದೂರು ದಾಖಲಾದ ನಂತರ 6 ದಿನಗಳ ಬಳಿಕ ನಿನ್ನೆ ಮುರುಘಾ ಮಠಕ್ಕೆ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಚಿತ್ರದುರ್ಗ ಪೊಲೀಸರು ಆಗಮಿಸಿ ಶ್ರೀಗಳನ್ನು ವಶಕ್ಕೆ ಪಡೆದರು. 

ನಂತರ ಅವರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಕೊಡಿಸಲಾಯಿತು. ನಸುಕಿನ 2.25ಕ್ಕೆ ಆಸ್ಪತ್ರೆಯಿಂದ ಹೊರಟ ಪೊಲೀಸರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಮುಂದೆ ಹಾಜರುಪಡಿಸಿದರು. ಶರಣರ ಪರ ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು. ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶರು ಇಂದು ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿ, ಶ್ರೀಗಳನ್ನು 1 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಈ ಬಗ್ಗೆ ನಿನ್ನೆ ರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಚಿತ್ರದುರ್ಗದ ಎಸ್‍ಪಿ ಕೆ.ಪರಶುರಾಮ್, ದಸ್ತಗಿರಿ ಮಾಡಿ ವೈದ್ಯಕೀಯ ಪರೀಕ್ಷೆ ನಡೆಸಿ ಶ್ರೀಗಳನ್ನು ನ್ಯಾಯಧೀಶರ ಮುಂದೆ ಹಾಜರುಪಡಿಸಲಾಗಿತ್ತು. 1 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಒಬ್ಬ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದೇವೆ. ಉಳಿದವರನ್ನು ಕೂಡ ವಿಚಾರಣೆ ನಡೆಸುತ್ತೇವೆ. ಸಾಕ್ಷ್ಯಾಧಾರ ಕಲೆ ಹಾಕಲು ವಿಳಂಬ ಆಯಿತು. ಆದ್ದರಿಂದ ಶ್ರೀಗಳ ಬಂಧನ ವಿಳಂಬವಾಯಿತು ಎಂದರು.

SCROLL FOR NEXT