ರಾಜ್ಯ

ಮಳೆಗೆ ಮನೆಗಳ ಕುಸಿತ: ದೇಗುಲಗಳಲ್ಲಿ ಆಶ್ರಯ ಪಡೆದ ಡಂಬಲ್ ಗ್ರಾಮಸ್ಥರು

Srinivasamurthy VN

ಗದಗ: ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನತೆ ತತ್ತರಿಸಿ ಹೋಗಿದ್ದು, ಮನೆ ಕಳೆದುಕೊಂಡು ಇದೀಗ ದೇಗುಲಗಳಲ್ಲಿ ಆಶ್ರಯ ಪಡೆಯುವ ಸ್ಥಿತಿಗೆ ಬಂದಿದ್ದಾರೆ.

ಹೌದು.. ತೀವ್ರ ಮಳೆಯಿಂದ ರಾಜ್ಯದ ಗದಗ ಜಿಲ್ಲೆಯ ತತ್ತರಿಸಿರುವ ಡಂಬಳ ಹಾಗೂ ಸುತ್ತಲಿನ ಗ್ರಾಮಗಳ ನಿವಾಸಿಗಳು ಮಣ್ಣಿನಿಂದ ನಿರ್ಮಿಸಿರುವ ಮನೆಗಳು ಕುಸಿದು ಬೀಳುತ್ತಿರುವುದರಿಂದ ದೇವಸ್ಥಾನ ಹಾಗೂ ಇತರೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಕೆಲವರು ತಮ್ಮ ಹೊಲಗಳಲ್ಲಿ ಟೆಂಟ್ ಹಾಕಿಕೊಂಡಿದ್ದು, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ನೂರಾರು ಮನೆಗಳು ಶಿಥಿಲಾವಸ್ಥೆಯಲ್ಲಿವೆ.

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕಪ್ಪತಗುಡ್ಡ ಬೆಟ್ಟದ ತಪ್ಪಲಿನಲ್ಲಿರುವ ಡಂಬಳ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗೋಡೆಗಳು ಒದ್ದೆಯಾಗಿ ಭಾಗಶಃ ಮತ್ತು ಸಂಪೂರ್ಣವಾಗಿ ಕುಸಿಯುತ್ತಿವೆ. ಹಾಗಾಗಿ ಜಿಲ್ಲೆಯ ಇತರೆ ಭಾಗಗಳಿಗೆ ಹೋಲಿಸಿದರೆ ಈ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದೆ ಮತ್ತು ಮಳೆ ಹಾನಿಗಳಾಗಿವೆ. ಇಲ್ಲಿ ಗ್ರಾಮಸ್ಥರು ಭಯದಿಂದಲೇ ಹಗಲು ರಾತ್ರಿ ಕಳೆಯುತ್ತಿದ್ದಾರೆ. ಗುರುವಾರ ಮತ್ತು ಶುಕ್ರವಾರ ಮೂರು ಮನೆಗಳು ಸಂಪೂರ್ಣ ಕುಸಿದಿವೆ. 

ನೂರಾರು ಮನೆಗಳು ಶಿಥಿಲಾವಸ್ಥೆಯಲ್ಲಿವೆ.ಯಾವಾಗ ಬೇಕಾದರೂ ಗೋಡೆಗಳು ಬೀಳುವ ಭೀತಿಯಲ್ಲಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು. ಕೆಲವು ಗ್ರಾಮಸ್ಥರು ಈಗಾಗಲೇ ಇತರ ಗ್ರಾಮಗಳು, ನಗರಗಳು ಮತ್ತು ಪಟ್ಟಣಗಳಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಿದ್ದಾರೆ. ಇನ್ನು ಕೆಲವರು ಗ್ರಾಮದಲ್ಲಿ ಸುರಕ್ಷಿತವಾಗಿರುವ ದೇವಸ್ಥಾನ, ಹೊಲ, ಗದ್ದೆಗಳಲ್ಲಿ ವಾಸಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಗ್ರಾಮಸ್ಥರಿಗೆ ಸಹಾಯ ಮಾಡಬೇಕೆಂದು ನಾವು ವಿನಂತಿಸುತ್ತೇವೆ ಎಂದು ಹೇಳಿದ್ದಾರೆ.
 

SCROLL FOR NEXT