ರಾಜ್ಯ

ಕರ್ನಾಟಕ -ಮಹಾ ಗಡಿವಿವಾದ: ರಾಜ್ಯದ ಪರವಾಗಿ ವಾದ ಮಂಡಿಸಲು ಅನುಭವಿ ಕಾನೂನು ತಜ್ಞರ ನೇಮಕ- ಬೊಮ್ಮಾಯಿ

Lingaraj Badiger

ಹುಬ್ಬಳ್ಳಿ: ಸರ್ವೋಚ್ಛ ನ್ಯಾಯಾಲಯದಲ್ಲಿ ಬರುವ  ನವೆಂಬರ್ 23ರಂದು ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ವಿಷಯ ವಿಚಾರಣೆಗೆ ಬರಲಿದೆ. ರಾಜ್ಯದ ಪರವಾಗಿ ವಾದ ಮಂಡಿಸಲು ಅನುಭವಿ ಹಾಗೂ ಹಿರಿಯ ಕಾನೂನು ತಜ್ಞರ ತಂಡ ನೇಮಕ ಮಾಡಲಾಗುವುದು  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಗಡಿವಿವಾದ ಕುರಿತು ಅಡ್ವಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ, ಅಗತ್ಯ ಸಲಹೆ ಸೂಚನೆ ನೀಡಲಾಗಿದೆ. ಸಾಕಷ್ಟು ಅಧ್ಯಯನ ಸಹ ನಡೆಸಲಾಗಿದೆ. ವಾದ ಮಂಡನೆಗೆ ಹಿರಿಯ, ಅನುಭವಿ ವಕೀಲರನ್ನು ನೇಮಿಸಲು ಸೂಚಿಸಲಾಗಿದೆ ಎಂದರು.

ವೃತ್ತಿಶಿಕ್ಷಣ ಪ್ರವೇಶಕ್ಕೆ ಸಿಇಟಿ ಅಂಕ ಪರಿಗಣನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶ  ಅಧ್ಯಯನ ಮಾಡಿ ವರದಿ ಸಲ್ಲಿಸಲು ಅಡ್ವೊಕೇಟ್ ಜನರಲ್ ಅವರಿಗೆ ನಿರ್ದೇಶನ ನೀಡಲಾಗಿದೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಪೊಲೀಸ್ ಸಿಬ್ಬಂದಿಗೆ ಸಂಬಂಧಿಸಿದ ರಾಘವೇಂದ್ರ ಔರಾದ್‌ಕರ್ ವರದಿ ಅನುಷ್ಠಾನಗೊಳ್ಳುತ್ತಿದೆ. ಸಿಬ್ಬಂದಿಯೂ ಹೆಚ್ಚಿನ ಕೌಶಲ್ಯ ಬೆಳೆಸಿಕೊಳ್ಳಬೇಕು. ಕಂಪ್ಯೂಟರ್ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಎಲ್ಲ ಇಲಾಖೆಯ ಸಿಬ್ಬಂದಿಗೂ ಇದು ಕಡ್ಡಾಯವಾಗಿದೆ ಎಂದರು.

SCROLL FOR NEXT