ರಾಜ್ಯ

ನಿಯಮಬಾಹಿರ ಕೆಲಸಗಳಲ್ಲಿ ನಿಮ್ಮ ಪಾಲೆಷ್ಟು? ಸಿದ್ದುಗೆ ಶಿಕ್ಷಣ ಸಚಿವ ನಾಗೇಶ್ ಪ್ರಶ್ನೆ

Nagaraja AB

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಖಾಸಗಿ ಸಿಬಿಎಸ್‌ಸಿ ಶಾಲೆಗಳ ಆರಂಭಕ್ಕೆ NOC ನೀಡಲು ನಿಯಮಗಳನ್ನೇ ರೂಪಿಸದೆ, ಅನಧಿಕೃತವಾಗಿ ಹಲವು ಶಾಲೆಗಳನ್ನು ಆರಂಭಿಸಲು ಅವಕಾಶ ಮಾಡಿಕೊಟ್ಟು, ಅಕ್ರಮಕ್ಕೆ ಕುಮ್ಮಕ್ಕು ನೀಡಿರುವುದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ. ನಾಗೇಶ್ ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಚಿವರು, ಖಾಸಗಿ ಶಾಲೆ ಪ್ರಥಮ ಮಾನ್ಯತೆ & ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಆನ್‌ಲೈನ್‌ಗೊಳಿಸಿ, ಪಾರದರ್ಶಕ ವ್ಯವಸ್ಥೆಯನ್ನು ನಮ್ಮ ಸರ್ಕಾರ ಅನುಷ್ಠಾನಗೊಳಿಸಿದೆ. ಆದರೆ, ಶಿಸ್ತುಬದ್ಧ ವ್ಯವಸ್ಥೆಯ ಅನುಷ್ಠಾನದ ವಿರುದ್ಧವೇ ನಿಂತು, ಸಂಘಟನೆಯ ಅಧ್ಯಕ್ಷನೆಂದು ಹೇಳಿಕೊಂಡು ಓಡಾಡುವ ಬೂಟಾಟಿಕೆಯ ವ್ಯಕ್ತಿಯ ಅಕ್ರಮದಲ್ಲಿ ಸಿದ್ದರಾಮಯ್ಯ ಅವರ ಪಾಲೆಷ್ಟು? ಎಂದಿದ್ದಾರೆ. 

ಪಾರದರ್ಶಕ, ಪ್ರಾಮಾಣಿಕ, ಸುರಕ್ಷಿತ ಶೈಕ್ಷಣಿಕ ವಾತಾವರಣ ನಿರ್ಮಿಸಲು ಹೊರಟ ಬಿಜೆಪಿ ಸರ್ಕಾರದ ವಿರುದ್ಧ, ಕ್ರಿಮಿನಲ್ ಕೇಸ್ ಸೇರಿ ಹಲವು ಆರೋಪಗಳಿರುವ ಬೆಂಬಲಿಗನ ಮೂಲಕ ಆಧಾರರಹಿತ ಆರೋಪಗಳನ್ನು ಮಾಡಿಸಿ, ನಿಯಮಬಾಹಿರ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿರುವ ನಿಮಗೆ ಮಾತನಾಡಲು ಯಾವ ನೈತಿಕತೆ ಇದೆ?ನಿಯಮಬಾಹಿರ ಕೆಲಸಗಳಲ್ಲಿ ನಿಮ್ಮ ಪಾಲೆಷ್ಟು? ಎಂದು ಕಿಡಿಕಾರಿದ್ದಾರೆ. 

2004ರಲ್ಲಿ ತಮಿಳುನಾಡಿನ ಕುಂಭಕೋಣಂನ ಶಾಲೆಯೊಂದರಲ್ಲಿ ನಡೆದ ಅಗ್ನಿದುರಂತದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂಕೋರ್ಟ್ ಆದೇಶದ ಅನುಸಾರ ರೂಪಿಸಿರುವ ನಿಯಮಗಳು, ಮಾರ್ಗಸೂಚಿಗಳನ್ನೇ ನೀವು ಪ್ರಶ್ನಿಸುತ್ತಿದ್ದೀರಿ! ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ  ನಿಮಗೆ ಕಾಳಜಿ ಇಲ್ಲವೇ?  ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ. 

SCROLL FOR NEXT