ರಾಜ್ಯ

ಭಾರೀ ಮಳೆ: ಉಕ್ಕಿ ಹರಿಯುತ್ತಿರುವ ರಾಜ್ಯದಲ್ಲಿನ ಹಲವು ನದಿಗಳು

Nagaraja AB

ಬೆಂಗಳೂರು: ರಾಜ್ಯದಲ್ಲಿನ ಜಲಾನಯನ ಪ್ರದೇಶಗಳು ಮತ್ತು ನೆರೆಯ ಮಹಾರಾಷ್ಟ್ರದಲ್ಲಿನ ಭಾರೀ ಮಳೆಯ ನಂತರ ರಾಜ್ಯದ ಹಲವಾರು ನದಿಗಳು ಮತ್ತೆ ಉಕ್ಕಿ ಹರಿಯುತ್ತಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಕೃಷ್ಣಾ, ಭದ್ರಾ, ತುಂಗಾ, ಭೀಮಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ ಹಿರಣ್ಯಕೇಶಿ ಮತ್ತಿತರ ಹಲವಾರು ಸಣ್ಣ ನದಿಗಳು ತುಂಬಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಮೂಲಗಳು ತಿಳಿಸಿವೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗು ಪ್ರವಾಹ ಪೀಡಿತ ಪ್ರದೇಶಗಳಾಗಿವೆ.

ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿನ ಧಾರಾಕಾರ ಮಳೆಯಿಂದಾಗಿ ಬೆಳಗಾವಿಯ ಗೋಕಾಕ್ ಪಟ್ಟಣ ಮತ್ತು ಬಾಗಲಕೋಟೆಯ ಕೆಲವು ಭಾಗಗಳು ಜಲಾವೃತವಾಗಿವೆ. ಭೀಮಾ ಬ್ಯಾರೇಜ್‌ನ 11 ಗೇಟ್‌ಗಳನ್ನು ತೆರೆಯಲಾಗಿದ್ದು, ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು  ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಹಿಡಕಲ್ ಅಣೆಕಟ್ಟಿನ  ಗೇಟ್ ಕೂಡ ತೆರೆಯಲಾಗಿದ್ದು, 28 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಮದುರ್ಗ, ನಿಪ್ಪಾಣಿ ಮತ್ತು ಖಾನಾಪುರ ತಾಲೂಕುಗಳು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಲವು ಸೇತುವೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಚಾರ್ಮಾಡಿ ಘಾಟ್‌ನ ಕೆಲವು ಭಾಗಗಳಲ್ಲಿ ಭೂಕುಸಿತದ ವರದಿಯಾಗಿದೆ. 

SCROLL FOR NEXT