ರಾಜ್ಯ

ಬೆಟ್ಟ ಕುರುಬ ಸಮುದಾಯ ಎಸ್ ಟಿ ಪಟ್ಟಿಗೆ ಸೇರಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

Nagaraja AB

ಬೆಂಗಳೂರು: ಪ್ರಧಾನಿ‌ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ  ಕೇಂದ್ರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ವಿಚಾರವಾಗಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕದ ಬೆಟ್ಟ ಕುರುಬ ಜನಾಂಗಕ್ಕೆ ಸೇರಿದ 12 ಜಾತಿಗಳನ್ನ ಎಸ್.ಟಿ ಸಮುದಾಯದ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.

ಕರ್ನಾಟಕ ಸರ್ಕಾರ ಮಾಡಿದ ಶಿಫಾರಸ್ಸನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.  ಕರ್ನಾಟಕದ ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳ ಅಂಚಿನಲ್ಲಿ ಬೆಟ್ಟ ಕುರುಬ ಜನಾಂಗ ನೆಲೆಸಿತ್ತು. ಕಾರಣಾಂತರಗಳಿಂದ ಈ ಜನಾಂಗದವರನ್ನು ಒಕ್ಕಲೆಬ್ಬಿಸಲಾಗಿತ್ತು. ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸುವಂತೆ ಈ ಜನಾಂಗದವರು ಕಳೆದ 30 ವರ್ಷಗಳಿಂದ ಹೋರಾಡುತ್ತಿದ್ದರು.

ಕರ್ನಾಟಕದ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಾಗೂ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಬೆಟ್ಟ ಕುರುಬರು ವಾಸಿಸುತ್ತಿದ್ದರು. ಇವರನ್ನ ಕಾಡು ಕುರುಬರು ಎಂದು ಕರೆಯಲಾಗುತ್ತಿತ್ತು. ನಂತರದಲ್ಲಿ ಬೆಟ್ಟ ಕುರುಬರು ಎಂದು ಕರೆಯಲಾಗುತ್ತಿತ್ತು. ಇದೀಗ ಈ ಸಮುದಾಯಕ್ಕೆ ಸೇರಿದ 12 ಉಪ ಜಾತಿಗಳನ್ನು ಎಸ್.ಟಿ ಸಮುದಾಯಕ್ಕೆ ಸೇರಿಸಲು‌ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಕುರಿತು ರಾಜ್ಯ ಬಿಜೆಪಿ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಸ್ಥೆಯ ಮೇರೆಗೆ ಬೆಟ್ಟ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಕೇಂದ್ರ ಸಚಿವ ಒಪ್ಪಿಗೆ ಸೂಚಿಸಿರುವುದಾಗಿ ತಿಳಿಸಲಾಗಿದೆ.

ಇದರಿಂದಾಗಿ ಈ ವರ್ಗದವರು ಸರ್ಕಾರದ ಹೆಚ್ಚುವರಿ ಸೌಲಭ್ಯಗಳನ್ನು ಪಡೆದು ಸಮಾಜ ಮುಖಿಯಾಗಲು ಸಹಕಾರಿಯಾಗಲಿದೆ ಎಂದು ಹೇಳಿದೆ.

ಮೀಸಲಾತಿಯ ಲಾಭ ಪಡೆದು ಬೆಟ್ಟ ಕುರುಬ ಸಮುದಾಯ ಸರ್ವತೋಮುಖ ಅಭಿವೃದ್ಧಿ ಸಾಧಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಶಿಸಿದ್ದಾರೆ.

SCROLL FOR NEXT