ರಾಜ್ಯ

ಸರ್ಕಾರದಲ್ಲಿ ಭ್ರಷ್ಟಾಚಾರ ಕಂಡುಬಂದರೆ ಡಯಲ್ ಮಾಡಿ: ಕಾಂಗ್ರೆಸ್ ನಿಂದ ಸಹಾಯವಾಣಿ ಆರಂಭ

Sumana Upadhyaya

ಬೆಂಗಳೂರು: ಸರ್ಕಾರದಲ್ಲಿ ನ್ಯೂನತೆ, ಭ್ರಷ್ಟಾಚಾರ ಕಂಡುಬಂದರೆ ಮಾಹಿತಿ ನೀಡಬಹುದು ಎಂದು ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಕಾಂಗ್ರೆಸ್ ಭ್ರಷ್ಟಾಚಾರ ಸಹಾಯವಾಣಿ ಮತ್ತು ವೆಬ್ ಸೈಟ್ ನ್ನು ಆರಂಭಿಸಿದೆ. ಸರ್ಕಾರದ ಇಲಾಖೆಗಳಲ್ಲಿ, ಸಚಿವರು, ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದೆ.

ನೀವು ಭ್ರಷ್ಟಾಚಾರದ ಸುಲಿಗೆ ಸಿಲುಕಿದರೆ 8447704040ಗೆ ಕರೆ ಮಾಡಿ ಇಲ್ಲವೇ www.40percentsarkara.com ಗೆ ಸಂದೇಶ ಕಳುಹಿಸಿ ಎಂದು ನಿನ್ನೆ ಕಾಂಗ್ರೆಸ್ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ. ಸರ್ಕಾರದಲ್ಲಿನ ಭ್ರಷ್ಟಾಚಾರ ರಾಜ್ಯಕ್ಕೆ ಕಳಂಕವನ್ನುಂಟುಮಾಡುತ್ತಿದ್ದು ಅದರಲ್ಲೂ ಶೇಕಡಾ 40 ಕಮಿಷನ್ ಧಕ್ಕೆಯನ್ನುಂಟುಮಾಡಿದೆ ಎಂದರು.

ಪಿಡಬ್ಲ್ಯೂಡಿ ಗುತ್ತಿಗೆದಾರರಿಂದ, ಮಠಮಾನ್ಯಗಳಿಗೆ ನೀಡುವ ಅನುದಾನ, ಉಪಕರಣಗಳ ಖರೀದಿ ಮೊದಲಾದವುಗಳಿಂದ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಕಮಿಷನ್ ಹೋಗುತ್ತದೆ. ಸಾರ್ವಜನಿಕರು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ನಾವು ಸಾರ್ವಜನಿಕರಿಗೆ ಸಹಾಯವಾಣಿ ನೀಡುತ್ತಿದ್ದೇವೆ, ಅವರ ಪರವಾಗಿ ದೂರು ನೀಡುತ್ತೇವೆ ಎಂದು ಶಿವಕುಮಾರ್ ಹೇಳಿದರು. "ನಾವು ಭ್ರಷ್ಟಾಚಾರದ ಸಮಸ್ಯೆಯನ್ನು ಜನರ ಬಳಿಗೆ ಕೊಂಡೊಯ್ಯಬೇಕು. ನಾವೆಲ್ಲರೂ ಜನರಿಗೆ ಜವಾಬ್ದಾರರಾಗಿರಬೇಕು... ಭ್ರಷ್ಟಾಚಾರಕ್ಕೆ ಮೆನು ಕಾರ್ಡ್ ಇದೆ, ವಿವಿಧ ಭ್ರಷ್ಟಾಚಾರಗಳಿಗೆ ನಿಗದಿತ ದರಗಳಿವೆ ಎಂದರು.

ಪ್ರೊ.ಅಶೋಕ್ ಆತ್ಮಹತ್ಯೆಗೆ ಶರಣಾದ ಪ್ರಕರಣ ಮತ್ತು ಪಿಎಸ್‌ಐ ಹಗರಣದಲ್ಲಿ ಸಣ್ಣ ಅಪರಾಧಿಗಳನ್ನು ಮಾತ್ರ ಬಂಧಿಸಲಾಗಿದೆ ಎಂದು ಆರೋಪಿಸಿದರು. ಅಭ್ಯರ್ಥಿಗಳನ್ನು ವಿಚಾರಣೆಗೆ ಕರೆದೊಯ್ದಾಗ ಗೃಹ ಸಚಿವರು ಮತ್ತು ಉನ್ನತ ಶಿಕ್ಷಣ ಸಚಿವರು ಕರೆ ಮಾಡಿ ಬಿಡುಗಡೆ ಮಾಡುತ್ತಾರೆ ಎಂದು ಅವರು ಪ್ರತಿಪಾದಿಸಿದರು. 

ಈ ಹಗರಣಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವ ವಿರೋಧ ಪಕ್ಷದ ಶಾಸಕರಿಗೆ ಸರ್ಕಾರ ನೋಟಿಸ್ ಕಳುಹಿಸಿದೆ ಎಂದು ಸಹ ಆರೋಪಿಸಿದರು. ಬಿಜೆಪಿ ಶಾಸಕರಾದ ಹೆಚ್.ವಿಶ್ವನಾಥ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರೂ ಏಕೆ ತನಿಖೆ ನಡೆಸಿಲ್ಲ ಎಂದು ಕೇಳಿದರು.

ನಿನ್ನೆ ಮಂಗಳವಾರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗಳು ಸಹಾಯವಾಣಿಗೆ ಕರೆ ಮಾಡಿದಾಗ ಅದು ಕಾರ್ಯನಿರ್ವಹಿಸುತ್ತಿರಲಿಲ್ಲ.

SCROLL FOR NEXT