ರಾಜ್ಯ

ಬೆಂಗಳೂರಿನ ನಾಗರಿಕ ಸಮಸ್ಯೆಗಳ ಬಗ್ಗೆ ಗ್ರೌಂಡ್ ರಿಪೋರ್ಟ್ ಸಿದ್ಧಪಡಿಸಲು ಸಮೀಕ್ಷೆಗೆ ಮುಂದಾದ ಕಾಂಗ್ರೆಸ್

Ramyashree GN

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆಯೇ ಪ್ರತಿಪಕ್ಷ ಕಾಂಗ್ರೆಸ್ ತನ್ನನ್ನು ತಾನು ಸಜ್ಜುಗೊಳಿಸಲು ಮುಂದಾಗಿದ್ದು, ಸಮೀಕ್ಷೆಯ ಮೂಲಕ ನಾಗರಿಕರ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಅನೇಕ ಬೆಂಗಳೂರಿಗರು ಸಮೀಕ್ಷೆಯ ಏಜೆನ್ಸಿಯಿಂದ ಕರೆಗಳನ್ನು ಸ್ವೀಕರಿಸುತ್ತಿದ್ದು, ಅವರು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ರಸ್ತೆ, ನೀರು, ಬೀದಿದೀಪ ಅಥವಾ ಇತರ ನಾಗರಿಕ ಸೌಲಭ್ಯಗಳ ಕುರಿತು ಕೇಳಲಾಗುತ್ತಿದೆ. ಕರೆ ಮಾಡುವವರು ಸಾಮಾನ್ಯವಾಗಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಹತ್ತಾರು ಜನರು ಕರೆಗಳನ್ನು ಸ್ವೀಕರಿಸಿದ್ದಾರೆ.

ಕೆಲವು ಬೆಂಗಳೂರಿಗರು ಸಮೀಕ್ಷೆಗೆ ತಮ್ಮ ಪ್ರತಿಕ್ರಿಯೆಗಳನ್ನು ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಶಾಂತಿನಗರ ವಿಧಾನಸಭಾ ಕ್ಷೇತ್ರದ ಹಿರಿಯ ಮಹಿಳಾ ಪತ್ರಕರ್ತೆಯೊಬ್ಬರು, 'ನನಗೆ 8050082448 ನಿಂದ ಕರೆ ಬಂದಿತ್ತು. ಅದು ದೆಹಲಿಯ ಎಐಸಿಸಿ ವಾರ್ ರೂಮ್ ಸಂಖ್ಯೆಯಾಗಿತ್ತು. ನಾನು ಯಾವುದೇ ನಾಗರಿಕ ಮತ್ತು ಇತರ ನಗರದ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಮತ್ತು ಕ್ಷೇತ್ರದ ಶಾಸಕ ಮತ್ತು ಹಿಂದಿನ ಕಾರ್ಪೊರೇಟರ್‌ಗಳ ಸೇವೆಗಳ ಬಗ್ಗೆ ನನಗೆ ಏನನ್ನಿಸುತ್ತದೆ ಎಂದು ಕರೆ ಮಾಡಿದವರು ಕೇಳಿದರು' ಎಂದು ತಿಳಿಸಿದರು.

ಇದನ್ನು ಪರಿಶೀಲಿಸಿದಾಗ, ಇದು ನವದೆಹಲಿಯಿಂದ ಕಾಂಗ್ರೆಸ್ ಕೈಗೊಂಡಿರುವ ಕ್ರಮ ಎಂಬುದು ತಿಳಿದುಬಂದಿದೆ. ರಾಜ್ಯದಲ್ಲಿ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಈ ಸಮೀಕ್ಷೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಇದರ ಬಗ್ಗೆ ಉಲ್ಲೇಖಿಸಿದ್ದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಎಂಎಲ್‌ಸಿ ಸಲೀಂ ಅಹ್ಮದ್ ಮಾತನಾಡಿ, ‘ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ಪಡೆಯಲು ಪಕ್ಷವು ಸಮೀಕ್ಷೆ ನಡೆಸುತ್ತಿದೆ. ಮುಂಬರುವ ಚುನಾವಣೆಗೆ ವಾರ್ಡ್‌ವಾರು ಸಿದ್ಧತೆ ನಡೆಸಲಾಗುತ್ತಿದೆ' ಎಂದರು.

ಪಕ್ಷದ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರು ಹಾಗೂ ಬೆಟರ್ ಬೆಂಗಳೂರು ಸಮಿತಿಯ ಸಹ ಸಂಚಾಲಕರೂ ಆಗಿರುವ ರಾಜ್ಯಸಭಾ ಮಾಜಿ ಸದಸ್ಯ ಪ್ರೊ.ರಾಜೇಗೌಡ ಮಾತನಾಡಿ, 'ಜನರಲ್ಲಿ ತೀವ್ರ ಅಸಮಾಧಾನ ಮತ್ತು ಕೋಪದಿಂದ ದೂರುಗಳು ಬರುತ್ತಿವೆ. ಇತ್ತೀಚಿನ ಪ್ರವಾಹದ ಸಮಯದಲ್ಲಿ ಈತರದ ಪ್ರತಿಕ್ರಿಯೆಗಳು ಹೆಚ್ಚಿದ್ದವು. ನಾಗರಿಕರನ್ನು ಸಬಲೀಕರಣಗೊಳಿಸಲು ನಾವು ದೂರದೃಷ್ಟಿಯ ಪರಿಹಾರ ಮತ್ತು ಪ್ರಣಾಳಿಕೆಯೊಂದಿಗೆ ಬರಲು ನಿರ್ಧರಿಸಿದ್ದೇವೆ. ಜನರಿಗೆ ನೇರವಾಗಿ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದೇವೆ' ಎಂದರು.

SCROLL FOR NEXT