ರಾಜ್ಯ

ಬ್ಯಾಂಕ್ ಗಳಿಂದ ರೈತರ ಆಸ್ತಿಪಾಸ್ತಿ ಜಪ್ತಿಗೆ ನಿಷೇಧ- ಸಿಎಂ ಬಸವರಾಜ ಬೊಮ್ಮಾಯಿ

Nagaraja AB

ಚಿತ್ರದುರ್ಗ: ಬ್ಯಾಂಕ್ ಗಳಿಂದ ರೈತರ ಆಸ್ತಿಪಾಸ್ತಿ ಜಪ್ತಿ ಮಾಡುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. 

ಸಿರಿಗೆರೆ ತರಳಬಾಳು ಬೃಹನ್ಮಠದಲ್ಲಿಂದು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ 30ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬ್ಯಾಂಕ್ ಗಳು ಜಪ್ತಿ ಮಾಡುವುದು, ನೋಟಿಸ್ ಜಾರಿ ಮಾಡುವ ಕೆಲಸ ಮಾಡುತ್ತಿವೆ. ಇದಕ್ಕೆ ಅಂತ್ಯ ಹಾಡಲು ಕಾನೂನಿನಲ್ಲಿ ತಿದ್ದುಪಡಿ ತರಲಾಗುವುದು. ಇದರಿಂದ ರೈತರಿಗೆ ಸಾಲ ತೀರಿಸುವ ಅವಕಾಶ ಮಾಡಿಕೊಡಲಾಗುವುದು ಎಂದರು.

ರೈತರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ನೀರಾವರಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. 14 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ  ನೀಡಲಾಗಿದೆ. ರೈತ ಕೂಲಿಕಾರರ ಮಕ್ಕಳು,ನೇಕಾರರು, ಮೀನುಗಾರರು, ಆಟೋ ರಿಕ್ಷಾ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗೆ ಯೋಜನೆ ವಿಸ್ತರಣೆಯಾಗಿದೆ. ರೈತರಿಗೆ 3 ಲಕ್ಷ ರೂ.ವರೆಗೂ ಬಡ್ಡಿ ರಹಿತ ಸಾಲ ನೀಡಿದರೂ ಅತಿವೃಷ್ಟಿ, ಅನಾವೃಷ್ಟಿ ಕಾರಣದಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಅವರು ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು  ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವುದು ಅಂತಿಮ ಘಟ್ಟದಲ್ಲಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತ ಕೂಡಲೇ 14 ಸಾವಿರ ಕೋಟಿ ರೂ. ಗಳ ನೆರವು ನಮಗೆ ಬರಲಿದೆ. ಇದನ್ನು ಪೂರ್ಣ ಪೂರ್ಣ ಮಾಡಲು ಹಣಕಾಸಿನ ಶಕ್ತಿ ದೊರೆಯುತ್ತದೆ ಎಂದರು. 

SCROLL FOR NEXT