ರಾಜ್ಯ

ನಾಪತ್ತೆಯಾಗಿದ್ದ ಬೆಂಗಳೂರಿನ 3 ಬಾಲಕಿಯರು ತಮಿಳುನಾಡಿನಲ್ಲಿ ಪತ್ತೆ

Srinivasamurthy VN

ಬೆಂಗಳೂರು: ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ 3 ಬಾಲಕಿಯರು ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

20 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಂಗಳೂರಿನ ಫ್ರೇಜರ್‌ ಟೌನ್‌ನಲ್ಲಿರುವ ಖಾಸಗಿ ಸಂಸ್ಥೆಯೊಂದರ ಪ್ರೌಢಶಾಲೆಯ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಹುಡುಗಿಯರು ಮನೆಯೊಂದರಲ್ಲಿ ಆಶ್ರಯ ಪಡೆದಿದ್ದರು ಮತ್ತು ಕೆಲಸಗಳಲ್ಲಿ ತೊಡಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಅವರು ಚೆನ್ನೈಗೇಕೆ ಹೋಗಿದ್ದರು ಎಂದು ತಿಳಿದುಬಂದಿಲ್ಲ.

ಪುಲಕೇಶಿನಗರದ ಪ್ರೊಮೆನೇಡ್ ರಸ್ತೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಬಾಲಕಿಯರು ಸೆಪ್ಟೆಂಬರ್ 6 ರಂದು ನಾಪತ್ತೆಯಾಗಿದ್ದರು. ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು 15 ವರ್ಷ ವಯಸ್ಸಿನವರಾಗಿದ್ದು, ಒಬ್ಬ ಹುಡುಗಿ 16 ವರ್ಷದವರು ಎಂದು ತಿಳಿದುಬಂದಿದೆ. ಇಬ್ಬರು ಶಾಲಾ ಹಾಸ್ಟೆಲ್‌ ಮತ್ತು ಒಬ್ಬ ಹುಡುಗಿ ಡೇ ಸ್ಕಾಲರ್ ನಲ್ಲಿ ನೆಲೆಸಿದ್ದರು ಎನ್ನಲಾಗಿದೆ.

ಮನೆಯಲ್ಲಿ ಸಮಸ್ಯೆಗಳಿದ್ದು, ಓದಿನಲ್ಲಿ ಆಸಕ್ತಿ ಇಲ್ಲ ಎಂದು ಬಾಲಕಿಯರು ಪತ್ರ ಬರೆದುಕೊಂಡಿದ್ದಾರೆ ಎನ್ನಲಾಗಿದೆ. ಬಾಲಕಿಯರು ನಾಪತ್ತೆಯಾದ ಒಂದು ವಾರದ ನಂತರ ಶಾಲೆಯ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪೋಷಕರು ಪ್ರತಿಭಟನೆ ನಡೆಸಿದ್ದರು. ತಮ್ಮ ಹೆಣ್ಣು ಮಕ್ಕಳನ್ನು ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು "ಸ್ಲಂ ಜನರು" ಎಂದು ಹೇಳಿ ಅವಮಾನಿಸಿದ್ದಾರೆ. ಇದರಿಂದ ಮನನೊಂದ ತಮ್ಮ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಪ್ರತಿಭಟನೆ ವೇಳೆ ಆರೋಪಿಸಿದ್ದರು. ಮೂರು ಪೊಲೀಸ್ ತಂಡಗಳು ತಮಿಳುನಾಡು, ಕೇರಳ ಮತ್ತು ಇತರ ನೆರೆಯ ರಾಜ್ಯಗಳ ವೆಲಂಕಣಿಯಲ್ಲಿ ಇವರಿಗಾಗಿ ಶೋಧ ನಡೆಸಿದ್ದವು. ಇದೀಗ ಬಾಲಕಿಯರು ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ.

SCROLL FOR NEXT